ಹವಾಮಾನ ವೈಪರಿತ್ಯದ ನಡುವೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನಕ್ಕೆ ಆಗಸದಲ್ಲಿ ಆಲಿಕಲ್ಲು ಬಲವಾಗಿ ಬಡಿದು ಹಾನಿಗೊಳಗಾಗಿದ್ದು, ಪೈಲೆಟ್ ಸಮಯಪ್ರಜ್ಞೆಯಿಂದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದರಿಂದ 200 ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಬುಧವಾರ ಸಂಜೆ ಶ್ರೀನಗರದಿಂದ ದೆಹಲಿಗೆ ಬರುತ್ತಿದ್ದ ಇಂಡಿಗೋ ವಿಮಾನ 6ಇ2142 ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಆಲಿಕಲ್ಲು ಬಡಿದ ಪರಿಣಾಮ ವಿಮಾನದ ಮೂಗು ಹಾನಿಗೊಳಗಾಗಿದೆ.
I had a narrow escape while flying from Delhi to Srinagar. Flight number #6E2142. Hats off to the captain for the safe landing.@IndiGo6E pic.twitter.com/tNEKwGOT4q
— Sheikh Samiullah (@_iamsamiullah) May 21, 2025
ಹವಾಮಾನ ವೈಪರಿತ್ಯದಲ್ಲಿ ದೆಹಲಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ-ಗಾಳಿ ಆಗುತ್ತಿದ್ದು ವಿಮಾನ ಒಂದು ಹಂತದಲ್ಲಿ ಬಿರುಗಾಳಿಗೆ ತತ್ತರಿಸಿ ಅಲುಗಾಡಲು ಆರಂಭಿಸಿದ್ದು, ಪ್ರಯಾಣಿಕರು ಭಯದಿಂದ ಕಿರುಚಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಭಾರೀ ಗಾಳಿಯಿಂದ ವಿಮಾನ ಅಲುಗಾಡುತ್ತಿದ್ದರಿಂದ ಲ್ಯಾಂಡ್ ಮಾಡಲು ಪ್ರಯಾಸಪಡಬೇಕಾಯಿತು. ಈ ವೇಳೆ ಪೈಲೆಟ್ ಸಮಯಪ್ರಜ್ಞೆಯಿಂದ ಸಂಜೆ 6.30ರ ಸುಮಾರಿಗೆ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದೆ. ಇದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.



