ವಿಧಾನಪರಿಷತ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಸಿಟಿ ರವಿ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ.
ಸಿಐಡಿ ಪೊಲೀಸರು ಮೊದಲ ಬಾರಿ ನೋಟಿಸ್ ನೀಡಿದ್ದಾಗ ವಿಚಾರಣೆಗೆ ಹಾಜರಾಗದ ಸಿಟಿ ರವಿಗೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರಿನ ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದರು.
ಮೊದಲ ಬಾರಿ ನೋಟಿಸ್ ನೀಡಿದ್ದಾಗ ನಾನು ಮನೆಯಲ್ಲಿ ಇರಲಿಲ್ಲ. ಹಾಗಾಗಿ ವಿಚಾರಣೆಗೆ ಹಾಜರಾಗಲಿರಲಿಲ್ಲ. ಇದೀಗ ಎರಡನೇ ಬಾರಿ ನೀಡಿದ ನೋಟಿಸ್ ಕೈ ಸೇರಿದ ಹಿನ್ನೆಲೆಯಲ್ಲಿ ವಿಚಾರಣೆ ಗೆ ಹಾಜರಾಗುವುದಾಗಿ ಸಿಟಿ ರವಿ ಹೇಳಿಕೆ ನೀಡಿದ್ದರು.
ಬೆಳಗಾವಿ ವಿಧಾನಸಭೆ ಅಧಿವೇಶನದ ವೇಳೆ ಸಿಟಿ ರವಿ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಪೊಲೀಸರಿಗೆ ದೂರು ನೀಡಿದ್ದರು. ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಸಿಐಡಿ ಸಿಟಿ ರವಿ ಅವರನ್ನು ವಿಚಾರಣೆಗೊಳಪಡಿಸಿದ್ದು, ದೂರು ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದಲೂ ಮಾಹಿತಿ ಪಡೆಯುವ ನಿರೀಕ್ಷೆ ಇದೆ.