ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಗುರುವಾರ ಅಂಬೇಡ್ಕರ್ ವಿಷಯದ ಮೇಲೆ ಚರ್ಚೆ ನಡೆಯುವ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಸಿಟಿ ರವಿ ತಮ್ಮ ವಿರುದ್ಧದ ಆರೋಪ ನಿರಾಕರಿಸಿದರೂ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಹೀರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬೆನ್ನಲ್ಲೇ ಸುವರ್ಣ ಸೌಧದಲ್ಲಿ ಬಂಧಿಸಲಾಗಿದೆ. ಸಿಟಿ ರವಿ ಅವರನ್ನು ಗುರುವಾರ ಸಂಜೆ ಬಂಧಿಸಿದ ಪೊಲೀಸರು ಖಾನಾಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಇದಕ್ಕೂ ಮುನ್ನ ಲಕ್ಷ್ಮೀ ಹೆಬ್ಬಾಳ್ಕರ್ ಸಭಾಪತಿ ಬಸವರಾಜ ಹೊರಟ್ಟಿಗೆ ತಮ್ಮ ವಿರುದ್ಧ ಸದನದಲ್ಲಿ ಅಶ್ಲೀಲವಾಗಿ ನಿಂದಿಸಿದ್ದ ಬಗ್ಗೆ ದೂರು ನೀಡಿದರು. ಆದರೆ ವಿಧಾನಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಹೊರಟ್ಟಿ ಪರಿಶೀಲನೆ ನಡೆಸುವಾಗಿ ತೆರಳಿದರು.
ಈ ವೇಳೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಸಿಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಿನಗೆ ತಾಯಿ ಇಲ್ವೇನೋ, ಮಗಳು ಇಲ್ವೇನೋ, ಹೆಂಡ್ತಿ ಇಲ್ಲವೇನೋ, ಒಬ್ಬ ಹೆಣ್ಣು ಮಗಳ ಬಗ್ಗೆ ಹಿಂಗೆ ಮಾತನಾಡ್ತಿಯಾ ಅಂತ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.