ಗಾಂಧಿ ಕುಟುಂಬಕ್ಕೆ ನಾನು ನಿಯತ್ತಾಗಿ ಇದ್ದೇನೆ. ಅದಕ್ಕೆ ಒಂದು ದಿನ ಫಲ ಸಿಗುತ್ತದೆ ಎಂಬ ವಿಶ್ವಾಸವಿದೆ. ಅಲ್ಲಿಯವರೆಗೂ ಕಾಯುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮನದಾಳದ ಮಾತು ಹಂಚಿಕೊಂಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್, ನನ್ನ ವಿಕ್ನೇಸ್ ಅಂದರೆ ನಾನು ಬ್ಲಾಕ್ ಮೇಲ್ ಮಾಡುವುದಿಲ್ಲ. ನಾನು ಯಾವತ್ತೂ ಹೈಕಮಾಂಡ್ ಗೆ ಬ್ಲಾಕ್ ಮೇಲ್ ಮಾಡಿಲ್ಲ. ಗಾಂಧಿ ಕುಟುಂಬಕ್ಕೆ ನಾನು ಲಾಯಲ್ ಆಗಿದ್ದೇನೆ. ಅವರಿಗೆ ದ್ರೋಹ ಮಾಡುವ ಯಾವ ಕೆಲಸ ಮಾಡಿಲ್ಲ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಸದ್ಯಕ್ಕೆ ಆ ವಿಚಾರ ಬಹಿರಂಗಪಡಿಸುವುದಿಲ್ಲ. ಸಮಯ ಬಂದಾಗ ನೋಡೋಣ. ನಮ್ಮ ಶ್ರಮ ಹಾಗೂ ನಿಯತ್ತಿಗೆ ಒಂದಲ್ಲ ಒಂದು ದಿನ ಫಲ ಸಿಗುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಫಲಿತಾಂಶದ ಬಗ್ಗೆ ನನಗೆ ಈಗಲೂ ಅನುಮಾನವಿದೆ. ಆದರೆ ಒಪ್ಪಿಕೊಳ್ಳಬೇಕಾಯಿತು. ಒಪ್ಪಿಕೊಂಡಿದ್ದೇವೆ ಎಂದು ಡಿಕೆ ಶಿವಕುಮಾರ್ ನುಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗೆದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಆಗಿದ್ದರು. ಈ ಬಾರಿ ಚುನಾವಣೆಯಲ್ಲಿ ಸಾಕಷ್ಟು ಷಡ್ಯಂತ್ರಗಳು ನಡೆದಿತ್ತು. ನಮಗೆ ಇದರ ಬಗ್ಗೆ ಮಾಹಿತಿಯೂ ಇದೆ. ಆದರೂ ಸೋಲು ಊಹಿಸಿರಲಿಲ್ಲ. ಫಲಿತಾಂಶದ ಬಗ್ಗೆ ಅನುಮಾನವಿದೆ. ಈ ಸೋಲು ಅರಗಿಸಿಕೊಳ್ಳಲು ನನಗೆ ಇನ್ನೂ ಆಗುತ್ತಿಲ್ಲ ಎಂದು ಅವರು ಹೇಳಿದರು.