ಮಳೆಗಾಲದಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ನಾನಾ ರೀತಿಗಳಲ್ಲಿ ಪತ್ರೊಡೆ ಮಾಡಿ ಸವಿಯುವುದು ಸಾಮಾನ್ಯ. ಬೇರೆ ಬೇರೆ ರೀತಿಯ ಕೆಸು ಎಲೆ ಬಳಸಿ ವರ್ಷಕ್ಕೊಮ್ಮೆಯಾದರೂ ಪತ್ರೊಡೆ ಮಾಡಿ ತಿಂದರೆ ದೇಹದಲ್ಲಿರುವ ಕಶ್ಮಲಗಳು ಹೊರ ಹೋಗುತ್ತವೆ ಎಂಬುದು ಇದಕ್ಕೆ ಕಾರಣ.
ಆದರೆ ಕರಾವಳಿಯಲ್ಲಿ ಕೆಲವು ಮೀನು ಪ್ರಿಯರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪತ್ರೊಡೆಯನ್ನು ಸೀಗಡಿ ಸಾರಿನಲ್ಲಿ ಕುದಿಸಿ ಸವಿಯುತ್ತಾರೆ. ಇದು ನಿಜವಾಗಿಯೂ ಅದ್ಭುತ ರುಚಿ.
ಬೇಕಾಗುವ ಸಾಮಗ್ರಿಗಳು:
ದಪ್ಪ ಕೆಸು ಎಲೆ ೧೦, ಬಿಳಿ ಸಾಮಾನ್ಯ ಕೆಸು ಎಲೆ ಆದ್ರೆ 20, ನೆನೆಸಿಟ್ಟ ಎರಡು ಲೋಟ ಅಕ್ಕಿ, ಸಿಗಡಿ ಮೀನು, ಖಾರಕ್ಕೆ ಬೇಕಾದಷ್ಟು ಒಣಮೆಣಸು, ಅದಕ್ಕೆ ತಕ್ಕಂತೆ ಕೊತ್ತಂಬರಿ, ಜೀರಿಗೆ, ಮೆಂತೆಕಾಳು, ಬೆಳ್ಳುಳ್ಳಿ ಎಸಳು, ಒಂದು ತುಂಡು ಈರುಳ್ಳಿ. ಕರಿಬೇವು , ಕಾಯಿತುರಿ, ಅರಶಿಣ, ಸಾಮಾನ್ಯ ಮಸಾಲೆಗೆ ಬಳಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹುಣಸೆಹುಳಿ.
ಮಾಡುವ ವಿಧಾನ:
ಕೆಸು ಎಲೆಗಳನ್ನು ಸ್ವಚ್ಛಗೊಳಿಸಿ ಸಣ್ಣದಾಗಿ ಹೆಚ್ಚಿಡಿ. ನೆನೆಸಿಟ್ಟ ಅಕ್ಕಿಗೆ ನಾಲ್ಕು ಮೆಣಸು, ಸ್ವಲ್ಪ ಉಪ್ಪು, ಸ್ವಲ್ಪ ಹುಣಸೆಹುಳಿ ಕಡುಬು ಹದಕ್ಕೆ ರುಬ್ಬಿಕೊಳ್ಳಿ. ಉಳಿದ ಮಸಾಲೆ ಪದಾರ್ಥಗಳನ್ನು ಹಾಗೂ ಕಾಯಿ ತುರಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹದವಾಗಿ ಹುರಿದು ರುಬ್ಬಿಟ್ಟುಕೊಳ್ಳಿ.
ರುಬ್ಬಿದ ಹಿಟ್ಟಿಗೆ ಹೆಚ್ಚಿಟ್ಟ ಕೆಸು ಎಲೆ ಮಿಕ್ಸ್ ಮಾಡಿ ಬಾಳೆ ಎಲೆಗೆ ಹರಡಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ. ಸ್ವಲ್ಪ ಆರಿದ ಮೇಲೆ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ.
ಒಗ್ಗರಣೆಗೆ ಒಂದು ಈರುಳ್ಳಿ ಹೆಚ್ಚಿ ಹಾಕಿ ರುಬ್ಬಿಟ್ಟ ಮಸಾಲೆಯನ್ನು ತೀರ ದಪ್ಪವೂ ಅಲ್ಲದೆ, ತೆಳುವು ಅಲ್ಲದೆ ಕಲಸಿ ಕುದಿಸಿ. ಚೆನ್ನಾಗಿ ಕುದಿದಾಗ ಮೊದಲಿಗೆ ಸ್ವಚ್ಛ ಮಾಡಿಟ್ಟ ಸಿಗಡಿ ಹಾಕಿ ೫ ನಿಮಿಷ ಕುದಿದ ನಂತರ ತುಂಡು ಮಾಡಿಟ್ಟ ಕೆಸು ಕಡುಬನ್ನು ಹಾಕಿ. ಹತ್ತು ನಿಮಿಷ ಸಣ್ಣ ಉರಿಯೊಂದಿಗೆ ಮುಚ್ಚಿಡಿ, ಆಗಾಗ ಜಾಗರೂಕತೆಯಿಂದ ತಿರುವಿ. ರಾತ್ರಿ ಹೀಗೆ ಮಾಡಿಟ್ಟು ಬೆಳಗ್ಗೆ ಸೂಪರ್ ಆದ ಬ್ರೇಕ್‌ಫಾಸ್ಟ್ ಮಾಡಿ.