ಕೆಜಿಎಫ್ ಚಿತ್ರರಂಗ ಪ್ಯಾನ್ ಇಂಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದಂತೆ ಕನ್ನಡದ ಪ್ರಮುಖ ನಿರ್ದೇಶಕರು, ನಟರು ಪ್ಯಾನ್ ಇಂಡಿಯಾ ಕಡೆ ಮುಖ ಮಾಡಿದರು. ಯಶ್ ಅಂತೂ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರುವ ಪ್ರಯತ್ನದಲ್ಲಿದ್ದರೆ, ದರ್ಶನ್ ಜೈಲು ಸೇರಿದರು.
ಸುದೀಪ್ ಬಿಗ್ ಬಾಸ್ ನಲ್ಲೇ ಹೆಚ್ಚು ಬ್ಯುಸಿ ಜೊತೆಗೆ ಚ್ಯುಸಿಯಾದರು. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಜೈಲರ್ ಹಿಟ್ ನಂತರ ಬೇರೇ ಭಾಷೆಯ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಆರಂಭಿಸಿದರು. ಧ್ರುವ ಸರ್ಜಾ ಪ್ಯಾನ್ ಇಂಡಿಯಾಗೆ ಲಗ್ಗೆ ಹಾಕಲು ಯತ್ನಿಸಿದರು.
ಇನ್ನೇನು ಕನ್ನಡ ಚಿತ್ರರಂಗದ ಕತೆ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಬಂತು ನೋಡಿ ಪ್ರೇಮದ ಊರಲಿ ಎಂಬ ಚಿತ್ರ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿತು. 2 ಕೋಟಿ ಬಜೆಟ್ ನಲ್ಲಿ ಚಿತ್ರ ನಿರ್ಮಿಸಿದರೂ ಬಿಡುಗಡೆ ಮಾಡಲು ಆಗದೇ 3 ವರ್ಷದಿಂದ ಡಬ್ಬಾದಲ್ಲೇ ಕೊಳೆಯುತ್ತಿದ್ದ ಚಿತ್ರ ಬಿಡುಗಡೆ ಆಗುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ತಂಪಾದ ಬಿರುಗಾಳಿಯನ್ನೇ ಎಬ್ಬಿಸಿದೆ.
ಒಂದೆರಡು ದಿನದಲ್ಲೇ ಭರ್ಜರಿ ಕಲೆಕ್ಷನ್ ಸಿನಿಮಾ ಮಾಡಿ ಹಿಟ್ ಎನಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮೊದಲ ದಿನ 10 ಥಿಯೇಟರ್ ನಲ್ಲಿ ಬಿಡುಗಡೆ ಆಗಿ ಮೊದಲ ದಿನ 10 ಲಕ್ಷ ಗಳಿಸಿದ್ದ ಚಿತ್ರ 50ನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಲಕ್ಷಗಳಲ್ಲಿ ಇದ್ದ ಇದರ ಕಲೆಕ್ಷನ್ ಈಗ ಕೋಟಿ ದಾಟಿದೆ. ಮೂರೇ ವಾರದಲ್ಲಿ 70 ಕೋಟಿ ಬಾಚಿಕೊಂಡಿರುವ ಪ್ರೇಮದ ಊರಲಿ ಚಿತ್ರ ಇದೀಗ 100 ಕೋಟಿಯತ್ತ ದಾಪುಗಾಲಿರಿಸಿದೆ.
ಸಿನಿಮಾ ಬಿಡುಗಡೆಗೆ ಥಿಯೇಟರ್ ಗಳೇ ಸಿಗುತ್ತಿಲ್ಲ. ಪೈಪೋಟಿ ಚಿತ್ರಗಳಿಂದ ನಷ್ಟ ಆಗುತ್ತದೆ. ದಿನಾಂಕ ಮುಂದೂಡಿ ಅಂತೆಲ್ಲಾ ಚರ್ಚೆಗಳು ನಡೆಯುತ್ತಿದ್ದವು. ಆದರೆ ಪ್ರೇಮದ ಊರಲಿ ಜನರೇ ದುಂಬಾಲು ಬಿದ್ದು ಥಿಯೇಟರ್ ಗಳಿಗೆ ಸಿನಿಮಾ ಹಾಕಿಸುತ್ತಿದ್ದಾರೆ. ಪ್ರೇಕ್ಷಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಥಿಯೇಟರ್ ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಾ ಹೋಗಿದೆ. 15 ಥಿಯೇಟರ್ ಗಳಲ್ಲಿ 60 ಶೋದೊಂದಿಗೆ ಬಿಡುಗಡೆ ಆಗಿದ್ದ ಪ್ರೇಮದ ಊರಲಿ ಚಿತ್ರ ಈಗ ೫೦೦ಕ್ಕೂ ಅಧಿಕ ಥಿಯೇಟರ್ ಗಳಲ್ಲಿ 1375 ಶೋಗಳನ್ನು ಕಾಣುತ್ತಿದೆ. ಮೂರನೇ ವಾರದ ಬುಧವಾರದ ಒಂದು ದಿನದ ಕಲೆಕ್ಷನ್ನೇ 5.35 ಕೋಟಿ ದಾಟಿದೆ ಅಂದರೆ ಲೆಕ್ಕ ಹಾಕಿ ಪ್ರೇಮದ ಊರಲಿ ಚಿತ್ರ ಹವಾ ಹೇಗಿದೆ ಅಂತಾ..
ಪ್ರೇಮದ ಊರಲಿ ಚಿತ್ರದ ಹವಾ ಇಷ್ಟಕ್ಕೆ ನಿಂತಿಲ್ಲ ಬದಲಾಗಿ ಈ ಚಿತ್ರ ಬಿಡುಗಡೆ ಆದ ಎರಡನೇ ವಾರಕ್ಕೆ ತೆಲುಗಿಗೆ ಡಬ್ ಆಗಿದೆ. ಬೇರೆ ಭಾಷೆಗಳಲ್ಲೂ ರಿಮೇಕ್, ಡಬ್ಬಿಂಗ್ ಬೇಡಿಕೆ ಹೆಚ್ಚಾಗುತ್ತಿದೆ. ಈ ಚಿತ್ರದ ಯಶಸ್ಸು ಕಂಡು ಸ್ಟಾರ್ ನಟರೆಲ್ಲಾ ಹಿರಿ ಹಿರಿ ಹಿಗಿದ್ದಾರೆ. ಕೊನೆಗೂ ಅದ್ಭುತ ಚಿತ್ರ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವಂತೆ ಮಾಡಿದೆ. ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಕೂಡ ಈ ಚಿತ್ರದ ಯಶಸ್ಸಿಗೆ ಖುಷಿ ವ್ಯಕ್ತಪಡಿಸಿದ್ದು, ಸಿನಿಮಾ ಚೆನ್ನಾಗಿದೆ ಅಂದರೆ ಓಡುತ್ತೆ ಅನ್ನೋದಿಕ್ಕೆ ಪ್ರೇಮದ ಊರಲಿ ಚಿತ್ರವೇ ಸಾಕ್ಷಿ. ಸಿನಿಮಾ ಚೆನ್ನಾಗಿದ್ದರೆ, ಬಜೆಟ್, ಹೀರೋ, ಪ್ರಮೋಷನ್ ಯಾವುದೂ ಬೇಡ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಬೃಂದಾವನ ಚಿತ್ರದ ಬಿಡುಗಡೆಯನ್ನು ಮುಂದೂಡಿ ಚಿತ್ರಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೆ ಹಂಚಿಕೆದಾರರು ಸಿಗದೇ ಒದ್ದಾಡುತ್ತಿದ್ದ ತಂಡಕ್ಕೆ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದಂತೆ ಥಿಯೇಟರ್ ಗಳೇ ಮನೆ ಮುಂದೆ ಹುಡುಕಿಕೊಂಡು ಬಂದಿವೆ. ಕನ್ನಡ ಚಿತ್ರರಂಗದ ಅತೀ ದೊಡ್ಡ ನಿರ್ಮಾಪಕ, ಡಿಸ್ಟ್ರಿಬ್ಯೂಟರ್ ಆಗಿರುವ ಜಯಣ್ಣ ಫಿಲಂಸ್ ಥಿಯೇಟರ್ ಗಳ ಸಂಖ್ಯೆ ಹೆಚ್ಚಿಸಲು ಮುಂದೆ ಬಂದಿದೆ ಅಂದರೆ ನೀವೇ ಲೆಕ್ಕ ಹಾಕಿ.
ಪ್ರೇಮದ ಊರಲಿ ಚಿತ್ರದಲ್ಲಿ ವಸಂತ ಪಾತ್ರ ಮಾಡಿದ ರಮಿಕಾ ಶಿವು ಈಗ ಟ್ರೆಂಡಿಂಗ್ ನಲ್ಲಿದ್ದಾರೆ. ಹಳ್ಳಿಯ ಹುಡುಕಾಟಿಕೆ ಹುಡುಗಿ ಆಗಿ ಅವರ ಅಭಿನಯ ಮನೆಮಾತಾಗಿದೆ. ರೈತನ ಮಗನಾಗಿ ಶ್ರೀರಾಮ್ ಮಿಂಚುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಪ್ರಭಾಸ್ ಬಂದಂತೆ ಆಗಿದೆ. ತೇಜಸ್ವಿನಿ ಪೂಣಚ್ಚ ಪ್ರಬುದ್ಧೆ ಪಾತ್ರದಲ್ಲಿ ಗಮನ ಸೆಳೆದರೆ, ರಂಗಾಯಣ ರಘು ಹೆಣ್ಣು ಸಿಗದ ರೈತನ ಅಪ್ಪನಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಆದರೆ ಈ ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ಅದ್ಭುತ ಕಮರ್ಷಿಯಲ್ ನಿರ್ದೇಶಕರಾಗಿ ಮನೋಜ್ ಕುಮಾರ್ ಹೊರಹೊಮ್ಮಿದ್ದಾರೆ.
ಹಾಗಂತ ಕನ್ನಡ ಚಿತ್ರರಂಗಕ್ಕೆ ಇಂತಹ ಅನಿರೀಕ್ಷಿತ ಚಿತ್ರಗಳು ಹಿಟ್ ಆಗಿದ್ದು ಇದೇ ಮೊದಲೇನಲ್ಲ. ಕಾಶಿನಾಥ್ ಅಭಿನಯದ ಅನುಭವ, ರಂಗಿತರಂಗ, ರವಿಚಂದ್ರನ್ ಅಭಿನಯದ ರಾಮಾಚಾರಿ, ಸುದೀಪ್ ಅಭಿನಯದ ಕಿಚ್ಚ, ದರ್ಶನ್ ಅಭಿನಯದ ಮೆಜೆಸ್ಟಿಕ್.. ಹೀಗೆ ಹೇಳುತ್ತಾ ಹೋದರೆ ಸಾಲು ಸಾಲು ಚಿತ್ರಗಳು ಕಣ್ಣ ಮುಂದೆ ಬರುತ್ತವೆ. ನಾಯಕ ಪ್ರಧಾನ ಚಿತ್ರಗಳಿಗೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಸಿನಿಮಾ ವೀಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ. ಒಳ್ಳೆಯ ಚಿತ್ರಗಳು ಬಂದರೆ ಖಂಡಿತ ಪ್ರೇಕ್ಷಕ ಕೈ ಹಿಡಿಯುತ್ತಾನೆ ಎಂಬುದಕ್ಕೆ ಪ್ರೇಮದ ಊರಲಿ ಚಿತ್ರವೇ ಸಾಕ್ಷಿ ಅಲ್ಲವೇ?



