ಕಲಾತ್ಮಕ ಬ್ಯಾಟ್ಸ್ ಮನ್ ಕ್ರಿಕೆಟ್ ನಲ್ಲಿ ಅಜರಾಮರರಾಗಿರುವ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಭಾರತ ತಂಡದ 17 ವರ್ಷಗಳ ಟಿ-20 ವಿಶ್ವಕಪ್ ಪ್ರಶಸ್ತಿ ಬರ ನೀಗಿಸಿ ವಿದಾಯ ಹೇಳಿದ್ದಾರೆ.
ಕ್ರಿಕೆಟಿಗನಾಗಿ ಒಂದು ಬಾರಿಯೂ ವಿಶ್ವಕಪ್ ಗೆಲ್ಲದ ರಾಹುಲ್ ದ್ರಾವಿಡ್ ಗೆ ಇದು ಕೋಚ್ ಆಗಿ ಎರಡನೇ ವಿಶ್ವಕಪ್ ಪ್ರಶಸ್ತಿಯಾಗಿದೆ. 19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದ ರಾಹುಲ್ ದ್ರಾವಿಡ್ ಇದೀಗ ಪುರುಷರ ಟಿ-20 ವಿಶ್ವಕಪ್ ಗೆಲ್ಲಿಸುವತ್ತ ಮುನ್ನಡೆಸಿದ್ದಾರೆ.
ಭಾರತ ತಂಡ ಟಿ-20 ವಿಶ್ವಕಪ್ ಗೆಲುವಿನೊಂದಿಗೆ ರಾಹುಲ್ ದ್ರಾವಿಡ್ ಅವರ ಭಾರತ ತಂಡದ ಮುಖ್ಯ ಕೋಚ್ ಆಗಿ ಎರಡೂವರೆ ವರ್ಷಗಳ ಒಪ್ಪಂದ ಅಂತ್ಯಗೊಂಡಿದೆ.
ಇತ್ತೀಚೆಗಷ್ಟೇ ಭಾರತ ತಂಡದ ಕೋಚ್ ಆಗಿ ವೈಯಕ್ತಿಕ ಕಾರಣಗಳಿಗಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ದ್ರಾವಿಡ್ ಸ್ಪಷ್ಟಪಡಿಸಿದ್ದರು.
ರವಿಶಾಸ್ತ್ರಿ ನಂತರ ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಅಲಂಕರಿಸಿದ್ದ ದ್ರಾವಿಡ್ ಗರಡಿಯಲ್ಲಿ ಭಾರತ ತಂಡ ವಿಶ್ವದ ಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ. ದ್ರಾವಿಡ್ ಅವರ ಎರಡೂವರೆ ಕೋಚ್ ಅವಧಿಯಲ್ಲಿ ಭಾರತ 56 ಏಕದಿನ ಪಂದ್ಯಗಳ ಪೈಕಿ 41ರಲ್ಲಿ ಜಯ ಸಾಧಿಸಿದ್ದರೆ, 69 ಟಿ-20 ಪಂದ್ಯಗಳ ಪೈಕಿ 48ರಲ್ಲಿ ಗೆಲುವು ಪಡೆದಿದೆ. ಅಲ್ಲದೇ ಟೆಸ್ಟ್ ಸರಣಿಯಲ್ಲಿ ಕೇವಲ 1ರಲ್ಲಿ ಸೋಲುಂಡಿದ್ದು, 5 ಸರಣಿ ಜಯ ಹಾಗೂ 2ರಲ್ಲಿ ಸಮಬಲದ ಗೌರವಕ್ಕೆ ಪಾತ್ರವಾಗಿದೆ. 2023ರ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಫೈನಲ್ ನಲ್ಲಿ ಒಂದು ಬಾರಿ ಸೋಲುಂಡಿತ್ತು.