Friday, June 5, 2026
Google search engine
Homeರಾಜ್ಯಕೊಟ್ಟ ಮಾತು ತಪ್ಪಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ: ರಾಮಲಿಂಗಾರೆಡ್ಡಿ

ಕೊಟ್ಟ ಮಾತು ತಪ್ಪಿದ್ದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ: ರಾಮಲಿಂಗಾರೆಡ್ಡಿ

ಬೆಂಗಳೂರು: ಕೇವಲ ಖಾತೆಗಾಗಿ ರಾಜೀನಾಮೆ ನೀಡುತ್ತಿಲ್ಲ, ಬದಲಿಗೆ ತಮಗೆ ಕೊಟ್ಟ ಮಾತು ತಪ್ಪಿದ್ದಕ್ಕಾಗಿ ನಾನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ದಿನಕ್ಕೆ ಸರ್ಕಾರಕ್ಕೆ ಬಂಡಾಯದ ಬಿಸಿ ತಟ್ಟಿದೆ. ತಮಗೆ ಇಷ್ಟವಿಲ್ಲದ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಕೋರಮಂಗಲದ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಮುಂದುಗಡೆ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ.

ಯಾರ ಮನವೊಲಿಕೆಗೂ ಬಗ್ಗದ ರೆಡ್ಡಿ, “ನನ್ನ ನಿರ್ಧಾರ ಅಚಲ, ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲ” ಎಂದು ಹಠ ಹಿಡಿದಿರುವುದು ಡಿಕೆಶಿ ಪಾಲಿಗೆ ಆರಂಭದಲ್ಲೇ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

2023ರಲ್ಲಿ ಸಿದ್ದರಾಮಯ್ಯ ಸಂಪುಟ ರಚನೆ ವೇಳೆ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಡಿಕೆಶಿ ಹಾಗೂ ಭೈರತಿ ಸುರೇಶ್ ಭರವಸೆ ನೀಡಿದ್ದರು. ಆದರೆ ಸಾರಿಗೆ ಖಾತೆ ನೀಡಲಾಯಿತು. ಆಗ ನಾನು ಬೇಸರಗೊಂಡಾಗ, ಮುಂದೆ ತಾವೇ ಸಿಎಂ ಆದಾಗ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನೇ ಕೊಡುವುದಾಗಿ ಡಿಕೆಶಿ ನನ್ನ ಕೋರಮಂಗಲದ ನಿವಾಸಕ್ಕೆ ಬಂತು ಮಾತು ಕೊಟ್ಟಿದ್ದರು. ಆದರೆ ಈಗ ಸಿಎಂ ಆದ ಬೆನ್ನಲ್ಲೇ ಜಲಸಂಪನ್ಮೂಲ ಖಾತೆ ನೀಡಿದ್ದಾರೆ. ಇದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲಎಂದು ರೆಡ್ಡಿ ತೀವ್ರ ಬೇಸರ ಹೊರಹಾಕಿದ್ದಾರೆ.

ಕೋರಮಂಗಲದ ಕಚೇರಿಯಲ್ಲಿ ಮಾಧ್ಯಮಗಳ ಮುಂದೆಯೇ ರಾಜೀನಾಮೆ ಪತ್ರ ಸಿದ್ಧಪಡಿಸುವ ವೇಳೆ ಹೈಡ್ರಾಮಾ ನಡೆಯಿತು. ಯೂತ್ ಕಾಂಗ್ರೆಸ್ ನಾಯಕ ಮನೋಹರ್, “ಅಧ್ಯಕ್ಷರು (ಡಿಕೆ ಶಿವಕುಮಾರ್) ಮಾತನಾಡುತ್ತಾರೆ, ದಯವಿಟ್ಟು ದುಡುಕಬೇಡಿ ಎಂದು ಮನವೊಲಿಸಲು ಯತ್ನಿಸಿದಾಗ ರಾಮಲಿಂಗಾರೆಡ್ಡಿ ತೀವ್ರ ಆಕ್ರೋಶಗೊಂಡರು. ‌

ನೋಹರ್ ನನಗೆ ಕೋಪ ಬರಿಸಬೇಡಿ, ನನ್ನ ನಿರ್ಧಾರ ಮುಗಿದ ಕಥೆ. ನೀವು ಮೊದಲು ಹೊರಗೆ ಹೋಗಿ, ನಾನು ಮಾತನಾಡಬೇಕು ಎಂದು ಗದರಿದ್ದಾರೆ.

ನನ್ನ ಮಗಳು ಅಥವಾ ಕುಟುಂಬದವರ ಬಳಿಯೂ ನಾನು ಈ ಬಗ್ಗೆ ಚರ್ಚಿಸಿಲ್ಲ. 1973 ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದು 53 ವರ್ಷಗಳಿಂದ ಪಕ್ಷದಲ್ಲಿದ್ದೇನೆ. 9 ಬಾರಿ ಶಾಸಕನಾಗಿದ್ದೇನೆ. ನಾನಾಗಿಯೇ ಯಾರ ಬಳಿಗೂ ಹೋಗಿ ರಾಜೀನಾಮೆ ಪತ್ರ ಕೊಡುವುದಿಲ್ಲ, ಇಲ್ಲಿಂದಲೇ ಘೋಷಿಸುತ್ತಿದ್ದೇನೆ ಎಂದು ಖಡಕ್‌ ಆಗಿ ಹೇಳಿದ ಪ್ರಸಂಗ ನಡೆಯಿತು.

ಹಿರಿಯ ನಾಯಕನೇ ಹೀಗೆ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿರುವುದು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಆರಂಭದಲ್ಲೇ ಆಪ್ತ ವಲಯದ ಈ ಅಸಮಾಧಾನ ಇತರ ಸಚಿವರಿಗೂ ಹರಡಿದರೆ ಸರ್ಕಾರದ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಗಬಹುದು ಎಂಬ ಆತಂಕ ಹೈಕಮಾಂಡ್ ಅನ್ನು ಕಾಡಲಾರಂಭಿಸಿದೆ. ವರಿಷ್ಠರು ಸಚಿವ ರಾಮಲಿಂಗಾರೆಡ್ಡಿ ಅವರನ್ನು ಹೇಗೆ ತಣ್ಣಗಾಗಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments