ಕೇಂದ್ರ ಸರ್ಕಾರವು ತಕ್ಷಣವೇ ಬಾಕಿ ಇರುವ 10,175 ಕೋಟಿ ರೂ. ಅನುದಾನವನ್ನ ಬಿಡುಗಡೆ ಮಾಡಬೇಕು ಎಂದು ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ಸದಸ್ಯ ನಾಸೀರ್ ಹುಸೇನ್ ಶೂನ್ಯವೇಳೆಯಲ್ಲಿ ಕರ್ನಾಟಕದ ಪರ ಧ್ವನಿ ಎತ್ತಿದ್ದು, ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವುದರಿಂದ ಸುಮಾರು 6,000 ಗ್ರಾಮ ಪಂಚಾಯಿತಿಗಳು ತೀವ್ರ ಹಣಕಾಸು ಸಂಕಷ್ಟ ಎದುರಿಸುತ್ತಿವೆ ಎಂದರು.
15ನೇ ಹಣಕಾಸು ಆಯೋಗದ ಅಡಿಯಲ್ಲಿ ಬರಬೇಕಿದ್ದ ಅನುದಾನವನ್ನ ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡದಿರುವುದರಿಂದ ಗ್ರಾಮೀಣ ಆಡಳಿತ ವ್ಯವಸ್ಥೆಯೇ ಸ್ತಬ್ಧಗೊಂಡಿದೆ ಎಂದು ನಾಸೀರ್ ಹುಸೇನ್ ಆರೋಪಿಸಿದರು.
ರಾಜ್ಯಸಭೆ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, 2025-26ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ 2,133 ಕೋಟಿ ರೂ. ಅನುದಾನ ಇನ್ನೂ ಬಾಕಿ ಇದೆ. ಇದರಲ್ಲಿ ಮೊದಲ ಕಂತಿನ 1,092 ಕೋಟಿ ರೂ. ಬಿಡುಗಡೆಯಾಗಿಲ್ಲ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಎಲ್ಲಾ ಕ್ರಮಗಳನ್ನ ಪೂರೈಸಿದ್ದರೂ ಕೇಂದ್ರದಿಂದ ಹಣ ಬರುತ್ತಿಲ್ಲ, ಈ ಅನುದಾನಗಳು ಸಂವಿಧಾನಾತ್ಮಕವಾಗಿ ನಿಗದಿಪಡಿಸಲಾದವುಗಳಾಗಿದ್ದು, ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳನ್ನ ಬಲಪಡಿಸಲು ಮತ್ತು ಪಾರದರ್ಶಕ ಹಣಕಾಸು ನೆರವು ಒದಗಿಸಲು ಉದ್ದೇಶಿಸಲಾಗಿದೆ. ಆದರೆ ಅನುದಾನ ಬಿಡುಗಡೆಯಾಗದ ಹಿನ್ನಲೆ ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಅಗತ್ಯ ಸಿಬ್ಬಂದಿಗಳ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ವ್ಯವಸ್ಥೆ, ಒಳಚರಂಡಿ, ಸ್ವಚ್ಛತೆ ಮತ್ತು ರಸ್ತೆ ಬೆಳಕುಗಳ ನಿರ್ವಹಣೆ ಸ್ಥಗಿತಗೊಂಡಿದೆ. ಅನೇಕ ಪಂಚಾಯಿತಿಗಳ ಖಾತೆಗಳಲ್ಲಿ ಮೂಲಭೂತ ವೆಚ್ಚಗಳಿಗೂ ಹಣ ಉಳಿದಿಲ್ಲ ಎಂದರು.
ನೀರಾವರಿ ದುರಸ್ತಿಗಾಗಿ ಕಾಯುತ್ತಿರುವ ರೈತರು
MNREGA ಯೋಜನೆಯಡಿ 1,066 ಕೋಟಿ ರೂ. ಮತ್ತು ಜಲ್ ಜೀವನ್ ಮಿಷನ್ ಯೋಜನೆಯಡಿ 6,976 ಕೋಟಿ ರೂ. ಸೇರಿದಂತೆ ಒಟ್ಟು 10,175 ಕೋಟಿ ಹಣ ಕರ್ನಾಟಕಕ್ಕೆ ಬಾಕಿ ಇದೆ. 15ನೇ ಹಣಕಾಸು ಆಯೋಗವು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಮತ್ತು ಅಗತ್ಯ ಸೇವೆಗಳನ್ನು ಒದಗಿಸಲು ಸಂಪನ್ಮೂಲಗಳನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊಂದಿತ್ತು. ಆದರೆ ಈ ವಿಳಂಬದಿಂದ ಗ್ರಾಮೀಣ ಜನರು ಬಳಲುತ್ತಿದ್ದಾರೆ.
ಕೇಂದ್ರ ಸರ್ಕಾರವು ತಕ್ಷಣವೇ ಬಾಕಿ ಇರುವ 10,175 ಕೋಟಿ ರೂ. ಅನುದಾನವನ್ನ ಬಿಡುಗಡೆ ಮಾಡಬೇಕು, ಗ್ರಾಮ ಪಂಚಾಯಿತಿಗಳ ಮೂಲ ಕಾರ್ಯಗಳು ಮುಂದುವರಿಯಲು ಮತ್ತು ಗ್ರಾಮೀಣ ಅಭಿವೃದ್ಧಿಗೆ ತೊಡಕಾಗದಂತೆ ಕೇಂದ್ರ ತ್ವರಿತ ಕ್ರಮ ಕೈಗೊಳ್ಳಬೇಕು ನಾಸೀರ್ ಹುಸೇನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.



