ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಬಹುದಿನಗಳ ಗೆಳತಿ ಸಾನಿಯಾ ಚಾಂದೋಕ್ ಅವರೊಂದಿಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ಆಗಸ್ಟ್ನಲ್ಲಿ ತೀರ ಖಾಸಗಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗೆಯೇ ಮಾರ್ಚ್ 3 ರಂದು ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ ಮೆಹಂದಿ ಸಮಾರಂಭವು ನಡೆದಿತ್ತು.
ಸಮಾರಂಭದಲ್ಲಿ ಕ್ರಿಕೆಟ್ ಜಗತ್ತಿನ ಅನೇಕ ದಂತಕಥೆಗಳು ಉಪಸ್ಥಿತರಿದ್ದರು. ಸಚಿನ್ ಅವರ ಆಪ್ತರು, ಕ್ರಿಕೆಟಿಗರು ಮತ್ತು ಸೆಲೆಬ್ರಿಟಿಗಳು ಮೆಹಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು, ಅವರಲ್ಲಿ ರವಿಶಾಸ್ತ್ರಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಅಜಿತ್ ಅಗರ್ಕರ್ ಸೇರಿದ್ದ್ದರು. ಇದೀಗ ಮದುವೆಗೆ ಅತಿಥಿಗಳ ಮಹಾಪೂರವೇ ಹರಿದುಬಂದಿತ್ತು.
ಮದುವೆಯಲ್ಲಿ ಗಣ್ಯರ ಉಪಸ್ಥಿತಿ
ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ಮುಂಬೈನಲ್ಲಿ ನೆರವೇರಿತು. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿಯೊಂದಿಗೆ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡರು. ಮಾಜಿ ಕ್ರಿಕೆಟಿಗ ಮತ್ತು ಆಯ್ಕೆದಾರ ಅಜಿತ್ ಅಗರ್ಕರ್ ಕೂಡ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದರು. ರಾಹುಲ್ ದ್ರಾವಿಡ್ ಅವರ ಪತ್ನಿ ವಿಜೇತಾ ಪೆಂಧಾರ್ಕರ್, ಕಿರಣ್ ಮೋರೆ, ಅನಿಲ್ ಕುಂಬ್ಳೆ, ಅಜಿಂಕ್ಯ ರಹಾನೆ, ಸುರೇಶ್ ರೈನಾ ಮತ್ತು ವೆಂಕಟೇಶ್ ಪ್ರಸಾದ್ (ಮಾಜಿ ಕ್ರಿಕೆಟಿಗ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ) ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.



