2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕರಾವಳಿ ಜಿಲ್ಲೆಗಳಾದ ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿದೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಿದ್ದು, ಉಡುಪಿ ಪ್ರಥಮ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಉಡುಪಿ ಜಿಲ್ಲೆಯಲ್ಲಿ ಶೇ.93.90 ಫಲಿತಾಂಶ ಬಂದಿದ್ದರೆ, ದಕ್ಷಿಣ ಕನ್ನಡದಲ್ಲಿ ಶೇ.93.57 ಹಾಗೂ ಯಾದಗಿರಿಯಲ್ಲಿ ಶೇ.48.45 ರಷ್ಟು ಫಲಿತಾಂಶ ಬಂದಿದೆ.
ರಾಜ್ಯದಲ್ಲಿ ಈ ಬಾರಿ 73.45 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೇ.52, ಅನುದಾನಿತ ಶಾಲೆಗಳಲ್ಲಿ ಶೇ.67, ಅನುದಾನ ರಹಿತ ಶಾಲೆಗಳಲ್ಲಿ ಶೇ.82 ಹಾಗೂ ಬಿಬಿಎಂಪಿ ಶಾಲೆಗಳಲ್ಲಿ ಶೇ. 68 ಹಾಗೂ ಪದವಿ ಪೂರ್ವ ಕಾಲೇಜು ವ್ಯಾಪ್ತಿಯಲ್ಲಿ ಶೇ.78 ಹಾಗೂ ವಸತಿ ಶಾಲೆಯಲ್ಲಿ ಶೇ.88 ಫಲಿತಾಂಶ ಬಂದಿದೆ ಎಂದು ಅವರು ತಿಳಿಸಿದರು.
ವಾಣಿಜ್ಯ ವಿಭಾಗದಲ್ಲಿ ಶೇ.76.07 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 82.54 ಮತ್ತು ಕಲಾ ವಿಭಾಗದಲ್ಲಿ 53.29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಕಾಲೇಜಿನ ದೀಪಶ್ರೀ, ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್ ಪರ್ಟ್ ವಸತಿ ಶಾಲೆಯ ಅಮೂಲ್ಯ ಕಾಮತ್, ಕಲಾ ವಿಭಾಗದಲ್ಲಿ ಬಳ್ಳಾರಿಯ ಸಂಜನಾ ಬಾಯಿ ಅಗ್ರಸ್ಥಾನ ಪಡೆದ ಸಾಧನೆ ಮಾಡಿದ್ದಾರೆ.



