Wednesday, May 13, 2026
Google search engine
Homeರಾಜ್ಯಮರ್ಯಾದೆ ಗೇಡು ಹತ್ಯೆ ತಡೆಗೆ ಮಾನ್ಯ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ: ಸಚಿವ ಹೆಚ್.ಸಿ. ಮಹದೇವಪ್ಪ

ಮರ್ಯಾದೆ ಗೇಡು ಹತ್ಯೆ ತಡೆಗೆ ಮಾನ್ಯ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ: ಸಚಿವ ಹೆಚ್.ಸಿ. ಮಹದೇವಪ್ಪ

ಹುಬ್ಬಳ್ಳಿ: ಮರ್ಯಾದೆ ಗೇಡು ಹತ್ಯೆ ತಡೆಗೆ ಮಾನ್ಯ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದರು.

ಮಾನ್ಯ ಪಾಟೀಲ್ ಹತ್ಯೆ ನಡೆದ ಹುಬ್ಬಳ್ಳಿಯ ಇನಾಂವೀರಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರದ 16 ಲಕ್ಷ ರೂ  ಚೆಕ್ ವಿತರಿಸಿದ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದರು.

‘ಈಗಾಗಲೇ ವಿಶೇಷವಾಗಿ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ 16 ಲಕ್ಷ ರೂ.ನ ಪರಿಹಾರದ ಚೆಕ್ ಅನ್ನು ನೀಡಲಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಅಮಾನವೀಯ ಕೃತ್ಯ, ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ, ಮನು ವಾದದ ಮನಸ್ಸುಗಳನ್ನು ಹತ್ತಿಕ್ಕಬೇಕು. ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರು, ಅದಕ್ಕೆ ಉತ್ತೇಜನ ಕೊಟ್ಟವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ’ ಎಂದರು.

ಈಗಾಗಲೇ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕೆ ಸೂಚನೆ ಕೊಡಲಾಗಿದೆ. ಇಂತಹ ಮರ್ಯಾದೆ ಗೇಡು ಹತ್ಯೆ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ನಡೆಯುತ್ತಿರಲಿಲ್ಲ. ನಮ್ಮದು ನಾಗರಿಕ ಮತ್ತು ಮುಂದುವರೆದ ರಾಜ್ಯ. ಪ್ರಾಯಕ್ಕೆ ಬಂದ ಯುವಕ, ಯುವತಿಯರು ತಮ್ಮ ಒಪ್ಪಿಗೆ ಮೇರೆಗೆ ಯಾವ ಧರ್ಮ, ಜಾತಿಯವರನ್ನು ಮದುವೆಯಾಗಲು ಮುಕ್ತವಾದ ಅವಕಾಶವಿದೆ. ಅದು ಅವರ ಮೂಲಭೂತ ಹಕ್ಕು, ಇದನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಈ ರೀತಿಯಾಗಿ ಕೆಲಸ ಮಾಡಿದ್ರೆ ಅದಕ್ಕೆ ಬೆಂಬಲಿಸುವ ವ್ಯಕ್ತಿಗಳನ್ನು ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ’ ಎಂದು ತಿಳಿಸಿದರು.

ಸಂತ್ರಸ್ತ ಕುಟುಂಬಕ್ಕೆ ಧೈರ್ಯ ಮತ್ತು ಸಾಂತ್ವನ ಹೇಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಏನೂ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಸಿಎಂ, ಗೃಹ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

‘ಇಂತಹ ಮಾರ್ಯಾದೆ ಗೇಡು ಹತ್ಯೆ ತಡೆಗೆ ಉಗ್ರವಾದ ಕಾನೂನು ತರಲು ಮುಂದಿನ ಅಧಿವೇಶನದಲ್ಲಿ ಪ್ರಯತ್ನ ಮಾಡಲಾಗುವುದು. ಮಹಿಳೆಯ ಇಚ್ಛೆಯ ವಿರುದ್ಧವಾಗಿ ವಿವಾಹ ಆಗಬಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ. ಅವಳ ಆಸೆಯಂತೆ ಮದುವೆ ಆಗಬೇಕು ಎಂಬುದನ್ನು ಹಿಂದೂ ಕೋಡ್ ಬಿಲ್ ಹೇಳುತ್ತದೆ. ಈ ಘಟನೆಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ. ಕೊಲೆ ಮಾಡಿದವರ ವಿರುದ್ಧ ತೀಕ್ಷ್ಣವಾಗಿ ಕ್ರಮ ಕೈಗೊಳ್ಳಲಾಗುವುದು, ಇಂತಹ ಘಟನೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

‘ಘಟನೆ ನಡೆದ ಕೂಡಲೇ ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸೂಚನೆ ಕೊಟ್ಟಿದ್ದೆ. ಈ ಘಟನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೇ ಅಂತವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಾನ್ಯ ಪಾಟೀಲ್ ಹೆಸರಿನಲ್ಲಿ ಪ್ರತ್ಯೇಕ ಮಸೂದೆ ಬಗ್ಗೆ ಪರಿಶೀಲನೆ ಮಾಡಲಾಗುವುದು’ ಎಂದು ಸಚಿವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments