ಪತ್ನಿ ಸೇರಿ 42 ಮಹಿಳೆಯರನ್ನು ಕೊಲೆಗೈದು ಕ್ವಾರಿಯಲ್ಲಿ ಬಿಸಾಡಿದ್ದ ಸೈಕೊ ಸರಣಿ ಹಂತಕನನ್ನು ಕೀನ್ಯಾದ ನೈರೋಬಿಯಲ್ಲಿ ಬಂಧಿಸಲಾಗಿದೆ.
ನೈರೋಬಿ ಸಮೀಪದ ಮುಕ್ರು ನಗರದ ನಿವಾಸಿ 33 ವರ್ಷದ ಕಾಲಿನ್ಸ್ ಜುಮೈಸಿ ಎಂಬಾತನನ್ನು ಬಂಧಿಸಲಾಗಿದ್ದು, ಈತ ನೀಡಿದ ಸುಳಿವಿನ ಮೇರೆಗೆ ಕ್ವಾರಿಯಲ್ಲಿ ಮೂಟೆ ಕಟ್ಟಿ ಬಿಸಾಡಿದ್ದ 9 ಶವಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಕಾಲಿನ್ಸ್ ಜುಮೈಸಿ ಪತ್ನಿ ಸೇರಿದಂತೆ 42 ಮಹಿಳೆಯರನ್ನು ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದಾನೆ. ಮನುಷ್ಯತ್ವಕ್ಕೆ ಬೆಲೆ ಇಲ್ಲದಂತೆ ವಿಕೃತವಾಗಿ ಕೊಲೆಗೈದ ಕಾಲಿನ್ಸ್ ವಿಚಾರಣೆ ನಡೆದಿದ್ದು, ಉಳಿದ ಶವಗಳಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
2022ರಲ್ಲಿ ಪತ್ನಿಯನ್ನು ಕೊಲೆಗೈದ ನಂತರ ಈತ ಸೈಕೋ ಆಗಿ ಬದಲಾಗಿದ್ದು, ಸತತವಾಗಿ ಮಹಿಳೆಯರನ್ನು ಕೊಲೆಗೈಯ್ಯುತ್ತಿದ್ದು, ಇತ್ತೀಚೆಗೆ ಜುಲೈ 11ರವರೆಗೆ ಸುಮಾರು 42 ಮಂದಿಯನ್ನು ಕೊಲೆಗೈದಿದ್ದಾನೆ. ಸರಣಿ ಹಂತಕನ ಮನೆಯಲ್ಲಿ ಹಲವಾರು ಮೊಬೈಲ್ ಫೋನ್, ಐಡಿ ಕಾರ್ಡ್ ಗಳು, ಕೊಲೆಗೆ ಬಳಸಿದ್ದಾನೆ ಎಂದು ಶಂಕಿಸಲಾದ ಮಚ್ಚು, ಸೆಲೋ ಟೇಪ್, ನೈಲಾನ್ ಹಗ್ಗಗಳು ಪತ್ತೆಯಾಗಿವೆ.
ಕಾಲಿನ್ಸ್ ಜುಮೈಸಿ ಬಂಧನಕ್ಕೆ ಸ್ಥಳೀಯರು ಕಿಡಿಕಾರಿದ್ದು, ಪ್ರತಿಭಟನೆ ನಡೆಸಿದ್ದಾರೆ. ಮುಗ್ಧ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರು ಪ್ರತಿಭಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿಕ್ಕಿರುವ ಶವಗಳನ್ನು ತುಂಡು ತುಂಡಾಗಿ ಕತ್ತರಿಸಲಾಗಿದ್ದು, ಕೊಲೆಗೈಯ್ಯುವ ಮುನ್ನ ಕೆಲವು ಸಮಯ ಈತನ ಜೊತೆಗಿದ್ದರು ಎಂದು ಶಂಕಿಸಲಾಗಿದೆ. ಸ್ಥಳೀಯ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಜುಲೈಸಿ ವಿಚಾರಣೆ ಮುಂದುವರಿಸಿದ್ದಾರೆ.