ಕಳೆದೆರಡು ವರ್ಷಗಳಿಂದ ಮನಸ್ತಾಪ ಇದ್ದರೂ ಜೋಡೆತ್ತುಗಳಂತೆ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸುತ್ತಾ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮೊದಲ ಬಾರಿ ಭಿನ್ನಮತ ಸ್ಫೋಟಗೊಂಡಿದೆ.
ಜಲಮಂಡಳಿಯ ಐವರು ಹಿರಿಯ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗೆ ಪತ್ರ ಬರೆದು, ಕೂಡಲೇ ವರ್ಗಾವಣೆ ಆದೇಶ ರದ್ದುಗೊಳಿಸಿ. ಇನ್ನು ಮುಂದೆ ತಮ್ಮ ಇಲಾಖೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಯ ವರ್ಗಾವಣೆ ಮಾಡಬೇಕಾದರೆ ತಮ್ಮ ಪೂರ್ವಾನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಿದ್ದಾರೆ.
ಗುರುವಾರ ಬೆಳಿಗ್ಗೆ ಬೆಂಗಳೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೂಡ ಮಾಧ್ಯಮಗಳ ಮುಂದೆ ಈ ವಿಷಯ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, ಜಲಸಂಪನ್ಮೂಲ ಇಲಾಖೆಯಲ್ಲಿ ಹೆಚ್ಚು ಇಂಜಿನಿಯರ್ ಗಳಿಲ್ಲ. ನಮಗೆ ತುರ್ತಾಗಿ ಇಂಜಿನಿಯರ್ ಗಳು ಬೇಕು. ಹೀಗಾಗಿ ನಮ್ಮ ಇಲಾಖೆಯಿಂದ ಯಾರನ್ನೂ ಬೇರೆಡೆಗೆ ಕಳಿಸಬೇಡಿ ಎಂದು ಪತ್ರ ಬರೆದಿದ್ದೇನೆ. ನಮ್ಮ ಇಲಾಖೆಗೆ ಬಂದು ಬಡ್ತಿ ಪಡೆದು ನಂತರ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಇತರ ಇಲಾಖೆಗಳಿಗೆ ವರ್ಗಾವಣೆ ಪಡೆಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.
ನಿಮ್ಮ ಅನುಮತಿ ಇಲ್ಲದೆ ಯಾರು ವರ್ಗಾವಣೆ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉನ್ನತ ಮಟ್ಟದಲ್ಲಿ ಈ ರೀತಿ ವರ್ಗಾವಣೆ ಮಾಡಲು ಅವಕಾಶ ಇದೆ. ಅನೇಕ ಶಾಸಕರು ತಮಗೆ ಬೇಕಾದವರನ್ನು ಬೇರೆ ಇಲಾಖೆಗೆ ಕಳಿಸಿಕೊಡಿ ಎಂದು ಒತ್ತಡ ಹಾಕುತ್ತಾರೆ. ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಲು ಇಂಜಿನಿಯರ್ ಗಳು ಮುಂದೆ ಬರುತ್ತಿಲ್ಲ. ಈ ದೃಷ್ಟಿಯಿಂದ ನನ್ನ ಗಮನಕ್ಕೆ ತರದೆ ಯಾರನ್ನೂ ವರ್ಗಾವಣೆ ಮಾಡಬೇಡಿ ಎಂದು ಹೇಳಿದ್ದೇನೆ ಎಂದರು.
ಮೂಲಗಳ ಪ್ರಕಾರ ವರ್ಗಾವಣೆ ಆದ 5 ಇಂಜಿನಿಯರ್ ಗಳ ಪೈಕಿ ಒಬ್ಬರು ಮಾಸಾಂತ್ಯದಲ್ಲಿ ನಿವೃತ್ತರಾಗಲಿದ್ದು, ರಜೆ ಮೇಲೆ ತೆರಳಿದ್ದಾರೆ. ಉಳಿದ ನಾಲ್ವರು ಬೇರೆ ಬೇರೆ ಕಾರಣಗಳಿಗೆ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ವರ್ಗಾವಣೆ ವಿಷಯದಲ್ಲಿ ಡಿಕೆ ಶಿವಕುಮಾರ್ ಅಸಮಾಧಾನಗೊಂಡಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಇಬ್ಬರೂ ಜೊತೆಯಾಗಿ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.



