ಆಫ್ಘಾನಿಸ್ತಾನ ತಂಡವನ್ನು 9 ವಿಕೆಟ್ ಗಳ ಭಾರೀ ಅಂತರದಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
ಟೌಬುವಾದಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡವನ್ನು 11.5 ಓವರ್ ಗಳಲ್ಲಿ 56 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 8.5 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ನಲ್ಲಿ ಮುಗ್ಗರಿಸುವ ತನ್ನ ಸೋಲಿನ ಕೊಂಡಿಯನ್ನು ಮುರಿದುಕೊಂಡು ನಿಷೇಧದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದ 32 ವರ್ಷಗಳ ನಂತರ ಮೊದಲ ಬಾರಿ ಫೈನಲ್ ಗೆ ಹೆಜ್ಜೆ ಹಾಕಿದ ಸಾಧನೆ ಮಾಡಿದೆ.
ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದ ಆಫ್ಘಾನಿಸ್ತಾನ ಹರಿಣಗಳ ದಾಳಿಗೆ ತತ್ತರಿಸಿ ಕಳಪೆ ಮೊತ್ತಕ್ಕೆ ಔಟಾಯಿತು. ತಂಡದ ಪರ ಅಜಮುಲ್ಲಾ ಓಮರಾಜಿ 10 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ ಮನ್ ಎರಡಂಕಿಯ ಮೊತ್ತವನ್ನೂ ದಾಟಲಿಲ್ಲ.
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸನ್, ಟಬರೆಜ್ ಶಂಸಿ ತಲಾ 3 ವಿಕೆಟ್ ಕಬಳಿಸಿದರೆ, ಕಾಗಿಸೊ ರಬಡಾ ಮತ್ತು ಏನ್ರಿಜ್ ನೊರ್ಜೆ ತಲಾ 2 ವಿಕೆಟ್ ಗಳಿಸಿದರು.
ಸುಲಭ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಕ್ವಿಂಟನ್ ಡಿ ಕಾಕ್ (5) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದರೂ ರೀಜಾ ಹೆಂಡ್ರಿಕ್ಸ್ (ಅಜೇಯ 29) ಮತ್ತು ನಾಯಕ ಮರ್ಕರಂ (23) ತಂಡಕ್ಕೆ 9 ವಿಕೆಟ್ ಗಳ ಜಯಭೇರಿ ತಂದುಕೊಟ್ಟಿದ್ದೂ ಅಲ್ಲದೇ ಫೈನಲ್ ಗೆ ಟಿಕೆಟ್ ಕೊಡಿಸಿದರು.