ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಲವು ಭಾಷೆಗಳಿಗೆ ಸಾಮಾಜಿಕ ಜಾಲತಾಣವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆ ಇಟ್ಟಿದ್ದು, ಕನ್ನಡದ 1000 ವಿಷಯ (ಕಂಟೆಂಟ್) ಗಳನ್ನು ಹಲವಾರು ಭಾಷೆಗಳಿಗೆ ಭಾಷಾಂತರಿಸಲಿದೆ.
ಆರ್ ಸಿಬಿ ಇತ್ತೀಚೆಗಷ್ಟೇ ಹಿಂದಿ ಎಕ್ಸ್ ಖಾತೆಯನ್ನು ಆರಂಭಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಕನ್ನಡದ ಜನಪ್ರಿಯ ವೀಡಿಯೋ, ಪೋಸ್ಟ್ ಹಾಗೂ ಆಡಿಯೋ ಸೇರಿದಂತೆ 1000 ವಿಷಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಲಿದೆ.
ರಾಜ್ಯೋತ್ಸವದ ಅಂಗವಾಗಿ ಕನ್ನಡದ ವಿಷಯಗಳನ್ನು ಇತರ ಭಾಷೆಗಳಿಗೂ ಪ್ರಸಾರ ಮಾಡಲು ಆರ್ ಸಿಬಿ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಇದೇ ವೇಳೆ ಆರ್ ಸಿಬಿ ಕಳೆದ ತಿಂಗಳು ಕನ್ನಡದ ಇನ್ ಸ್ಟಾಗ್ರಾಂ ಪೋಸ್ಟ್ ಆರಂಭಿಸಿದ್ದು, 1.6 ಲಕ್ಷ ಫಾಲೋವರ್ಸ್ ಹರಿದು ಬಂದಿದ್ದಾರೆ. ಈ ಮೂಲಕ ಆರ್ ಸಿಬಿ ಅಭಿಮಾನಿಗಳು ಎಂದೆಂದಿಗೂ ಜೊತೆಗಿದ್ದಾರೆ ಎಂಬುದು ತೋರಿಸಿಕೊಟ್ಟಿದ್ದಾರೆ. ಆದರೆ ಹಿಂದಿಯಲ್ಲಿ ಆರಂಭಿಸಿದ ಎಕ್ಸ್ ಖಾತೆಗೆ ಕೇವಲ 2500 ಫಾಲೋವರ್ಸ್ ಬಂದಿದ್ದಾರೆ.
ಸಾಮಾಜಿಕ ಜಾಲತಾಣವನ್ನು ವಿವಿಧ ಭಾಷೆಗಳಲ್ಲಿ ವಿಸ್ತರಿಸಲು ಮುಂದಾಗಿರುವ ಆರ್ ಸಿಬಿ ತಂಡದ ಆಟಗಾರರ ಕಥೆ, ಸಂದರ್ಶನ ಹಾಗೂ ಅವರಿಗೆ ಸಂಬಂಧಪಟ್ಟ ವಿಷಯಗಳನ್ನು ನಿರಂತರವಾಗಿ ಪೋಸ್ಟ್ ಮಾಡಲಿದೆ.