ಕೆಳ ಕ್ರಮಾಂಕದಲ್ಲಿ ಆಲ್ ರೌಂಡರ್ ನಿತೀಶ್ ರೆಡ್ಡಿ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ದಿಟ್ಟ ತಿರುಗೇಟು ನೀಡಿದೆ.
ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 164 ರನಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡ ಮಂದ ಬೆಳಕಿನ ಕಾರಣ ನಿಗದಿತ ಅವಧಿಗೂ ಮುನ್ನ ಆಟ ನಿಂತಾದ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿದೆ.
ಈ ಮೂಲಕ ಭಾರತ ಫಾಲೋಆನ್ ಭೀತಿಯಿಂದ ಮತ್ತೊಮ್ಮೆ ಪಾರಾಗಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಬೇಕಾದರೆ ಉಳಿದ ೧ ವಿಕೆಟ್ ನಿಂದ ೧೧೬ ರನ್ ಗಳಿಸಬೇಕಾದ ಕಠಿಣ ಸವಾಲು ಹೊಂದಿದೆ.
ನಿನ್ನೆ ಪ್ರಮುಖ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿಕೊಂಡಿದ್ದರಿಂದ ಕ್ರೀಸ್ ನಲ್ಲಿದ್ದ ರಿಷಭ್ ಪಂತ್ (28) ಮತ್ತು ರವೀಂದ್ರ ಜಡೇಜಾ (17) ಮೇಲೆ ಭರವಸೆ ಇಡಲಾಗಿತ್ತು. ಆದರೆ ಇವರಿಬ್ಬರು 32 ರನ್ ಜೊತೆಯಾಟಕ್ಕೆ ಸೀಮಿತವಾಯಿತು. ಆಗ ಭಾರತದ ಮೊತ್ತ 7 ವಿಕೆಟ್ ಗೆ 221 ರನ್ ಆಗಿದ್ದು, ಫಾಲೋಆನ್ ಗೆ ತುತ್ತಾಗುವ ಭೀತಿ ಎದುರಾಗಿತ್ತು.
ಈ ಹಂತದಲ್ಲಿ ಜೊತೆಯಾದ ಆಲ್ ರೌಂಡರ್ ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ 127 ರನ್ ಜೊತೆಯಾಟದಿಂದ ತಂಡವನ್ನು ಫಾಲೋಆನ್ ನಿಂದ ಪಾರಾದರು.
ನಿತೀಶ್ ಕುಮಾರ್ ರೆಡ್ಡಿ 176 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 105 ರನ್ ಬಾರಿಸಿ ಅಜೇಯರಾಗಿ ಉಳಿದರೆ, ವಾಷಿಂಗ್ಟನ್ ಸುಂದರ್ 162 ಎಸೆತಗಳಲ್ಲಿ 1 ಬೌಂಡರಿ ಸಹಾಯದಿಂದ ಅರ್ಧಶತಕ (50) ಪೂರೈಸಿ ನಿರ್ಗಮಿಸಿದರು. ಬುಮ್ರಾ (0) ಖಾತೆ ತೆರೆಯುವ ಮುನ್ನವೇ ಔಟಾದರೆ, ಸಿರಾಜ್ (2) ವಿಕೆಟ್ ಉಳಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲೆಂಡ್ ತಲಾ 3 ವಿಕೆಟ್ ಕಿತ್ತರು. ಸ್ಪಿನ್ನರ್ ನಾಥನ್ ಲಿಯಾನ್ 2 ವಿಕೆಟ್ ಗಳಿಸಿದರು.