ಬ್ಯಾಟಿಂಗ್ ನಲ್ಲಿ ಮುಗ್ಗರಿಸಿದ ಭಾರತ ತಂಡ ಬಾಕ್ಸಿಂಗ್ ಟೆಸ್ಟ್ ಪಂದ್ಯದಲ್ಲಿ 184 ರನ್ ಗಳಿಂದ ಹೀನಾಯ ಸೋಲುಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಮೆಲ್ಬೋರ್ನ್ ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಸೋಮವಾರ ಆಸ್ಟ್ರೇಲಿಯಾ ತಂಡವನ್ನು ಎರಡನೇ ಇನಿಂಗ್ಸ್ ನಲ್ಲಿ 234 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಗೆಲ್ಲಲು 340 ರನ್ ಗಳ ಗುರಿ ಪಡೆಯಿತು. ಗೆಲ್ಲಲು ಅಸಾಧ್ಯವಾದ ಗುರಿ ಬೆಂಬೆತ್ತಿದ ಭಾರತ ಕನಿಷ್ಠ ಡ್ರಾ ಮಾಡಿಕೊಳ್ಳುವ ಪ್ರಯತ್ನದಲ್ಲೂ ಮುಗ್ಗರಿಸಿ 155 ರನ್ ಗೆ ಆಲೌಟಾಯಿತು.
ಭಾರತ ತಂಡ 33 ರನ್ ಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿವು ನೀಡಿತು. ಆದರೆ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ನಾಲ್ಕನೇ ವಿಕೆಟ್ ಗೆ 88 ರನ್ ಜೊತೆಯಾಟ ನಿಭಾಯಿಸಿ ತಂಡದಲ್ಲಿ ಭರವಸೆ ಮೂಡಿಸಿದರು. ಆದರೆ ರಿಷಭ್ ಪಂತ್ ಔಟಾಗುತ್ತಿದ್ದಂತೆ ತಂಡ ಮತ್ತೊಮ್ಮೆ ನಾಟಕೀಯ ಕುಸಿತ ಕಂಡು ಸೋಲೊಪ್ಪಿಕೊಂಡಿತು.
ಯಶಸ್ವಿ ಜೈಸ್ವಾಲ್ 208 ಎಸೆತಗಳಲ್ಲಿ 8 ಬೌಂಡರಿ ಒಳಗೊಂಡ 84 ರನ್ ಬಾರಿಸಿ ವಿವಾದಾತ್ಮಕ ಎಲ್ ಬಿ ಬಲೆಗೆ ಬಿದ್ದರೆ, ರಿಷಭ್ ಪಂತ್ 104 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 30 ರನ್ ಗಳಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ ಮನ್ ಎರಡಂಕಿಯ ಮೊತ್ತವನ್ನು ಕೂಡ ದಾಟದೇ ಇರುವುದು ಬ್ಯಾಟ್ಸ್ ಮನ್ ಗಳ ವೈಫಲ್ಯಕ್ಕೆ ಕನ್ನಡಿ ಹಿಡಿಯುವಂತೆ ಇತ್ತು.
ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ 3 ವಿಕೆಟ್ ಉರುಳಿಸಿದರೆ, ನಾಥನ್ ಲಿಯಾನ್ 2 ವಿಕೆಟ್ ಕಬಳಿಸಿ ಭಾರತ ಡ್ರಾ ಆಸೆಗೆ ತಣ್ಣಿರೆರಚಿದರು.