ಕೊಲಂಬೊ: ಆರಂಭಿಕ ಇಶಾನ್ ಕಿಶನ್ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ ತಂಡ ಟಿ-20 ವಿಶ್ವಕಪ್ ನ ಹೈವೋಲ್ಟೇಜ್ ಪಂದ್ಯದಲ್ಲಿ 61 ರನ್ ಗಳ ಭಾರೀ ಅಂತರದಿಂದ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಮಹಾಶಿವರಾತ್ರಿಯನ್ನು ಭರ್ಜರಿಯಾಗಿ ಆಚರಿಸಿತು.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಕಠಿಣ ಗುರಿ ಬೆಂಬತ್ತಿದ ಪಾಕಿಸ್ತಾನ ತಂಡ 18 ಓವರ್ ಗಳಲ್ಲಿ 114 ರನ್ ಗೆ ಆಲೌಟಾಯಿತು.
ಭಾರತ ತಂಡದ ಸಂಘಟಿತ ದಾಳಿಗೆ ತತ್ತರಿಸಿದ ಪಾಕಿಸ್ತಾನ 34 ರನ್ ಗೆ 4 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಮುಗ್ಗರಿಸಿತು. ಮಧ್ಯಮ ಕ್ರಮಾಂಕದಲ್ಲಿ ಉಸ್ಮಾನ್ ಖಾನ್ [44] ಸಿಡಿಸಿ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ ಉಳಿದವರಿಂದ ಯಾವುದೇ ಕೊಡುಗೆ ಬರಲಿಲ್ಲ.
ಭಾರತದ ಪರ ಇಶಾನ್ ಕಿಶನ್ 40 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 77 ರನ್ ಗಳಿಸಿ ಭಾರತ ಬೃಹತ್ ಮೊತ್ತ ಪೇರಿಸಲು ನೆರವಾದರು. ಸೂರ್ಯಕುಮಾರ್ ಯಾದವ್ 32 ರನ್ ಬಾರಿಸಿದರು.


