ಪಂದ್ಯದಿಂದ ಹೊರಗುಳಿದಿದ್ದೇನೆ ಹೊರತು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ನಿರ್ಧಾರ ಮಾಡಿಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮ ಸ್ಪಷ್ಟಪಡಿಸಿದ್ದಾರೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಪಂದ್ಯದಿಂದ ಹಿಂಸೆ ಸರಿದಿದ್ದರ ಬಗ್ಗೆ ರೋಹಿತ್ ಶರ್ಮಾ ಎರಡನೇ ದಿನದಾಟದ ವೇಳೆ ಸ್ಪಷ್ಟನೆ ನೀಡಿದ್ದಾರೆ.
ನಾನಾಗಿಯೇ ಪಂದ್ಯದಿಂದ ಹೊರಗುಳಿದೆ. ಈ ಬಗ್ಗೆ ಕೋಚ್ ಮತ್ತು ಆಯ್ಕೆದಾರರೊಂದಿಗೆ ನಾನೇ ಮಾತನಾಡಿ ಅವರನ್ನು ಒಪ್ಪಿಸಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಮೆಲ್ಬೋರ್ನ್ ಪಂದ್ಯವೇ ರೋಹಿತ್ ಅವರ ಅಂತಿಮ ಪಂದ್ಯವಾಗಿರಲಿದೆ ಎಂದು ಮಾತುಗಳು ಕೇಳಿ ಬಂದಿದ್ದು, ಇದಕ್ಕೆ ರೋಹಿತ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತರೆ ಎಳೆದಿದ್ದಾರೆ.
ನಾನು ಬ್ಯಾಟಿಂದ ರನ್ ಗಳಿಸಲು ಸಾಧ್ಯವಾಗಲಿಲ್ಲ. ನಾನು ಫಾರ್ಮ್ನಲ್ಲಿಲ್ಲ. ಇದು ಪ್ರಮುಖ ಪಂದ್ಯ, ನಮಗೆ ಗೆಲುವಿನ ಅಗತ್ಯವಿತ್ತು. ಅನೇಕ ಆಟಗಾರರು ನನ್ನ ನಿರ್ಧಾರವನ್ನು ಬೆಂಬಲಿಸಲಿಲ್ಲ.
ನನಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿತ್ತು. ನಿರ್ಣಾಯಕ ಪಂದ್ಯಕ್ಕೆ ನಮಗೆ ಉತ್ತಮ ಫಾರ್ಮ್ನಲ್ಲಿರುವ ಆಟಗಾರನ ಅಗತ್ಯವಿತ್ತು.
ಹೀಗಾಗಿ ನಾನು ಈ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಸದ್ಯ ತಂಡಕ್ಕೆ ಏನು ಬೇಕು ಎಂಬುದೇ ನನ್ನ ಮತ್ತು ತಂಡದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ನಾವು ಸಿಡ್ನಿಗೆ ಬಂದ ನಂತರ, ತಂಡದಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡೆ. ಬ್ಯಾಟಿಂದ ಹೆಚ್ಚು ರನ್ ಗಳಿಸದ ಕಾರಣ ನಾನು ಹಿಂದೆ ಸರಿಯುವುದು ಮುಖ್ಯ ಎಂದು ನನ್ನ ಮನಸ್ಸಿನಲ್ಲಿತ್ತು.
ಪರ್ತ್ ಟೆಸ್ಟ್ ಪಂದ್ಯವನ್ನು ನಾವು ಹೇಗೆ ಗೆದ್ದೆವು ಎಂಬುದು ಸ್ಪಷ್ಟವಾಗಿದೆ. ಎರಡನೇ ಇನ್ನಿಂಗ್ಸಲ್ಲಿ ನಮಗೆ ೨೦೦ ರನ್ ಆರಂಭಿಕ ಜೊತೆಯಾಟ ಸಿಕ್ಕಿತು. ಅದುವೇ ನಮಗೆ ಪಂದ್ಯ ಗೆಲ್ಲಲು ನೆರವಾಯ್ತು.
ರಾಹುಲ್ ಮತ್ತು ಜೈಸ್ವಾಲ್ ನಿಜವಾಗಿಯೂ ಉತ್ತಮವಾಗಿ ಆಡಿದರು. ಮುಂದಿನ ೬ ತಿಂಗಳು ಅಥವಾ ೪ ತಿಂಗಳುಗಳಲ್ಲಿ ಏನಾಗುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಯಾವಾಗಲೂ ವಾಸ್ತವದಲ್ಲಿ ಇರುತ್ತೇನೆ. ಈ ಕ್ಷಣಕ್ಕೆ ಏನು ಮಾಡಬೇಕೆಂದು ಯೋಚಿಸುತ್ತೇನೆಂದು ತಿಳಿಸಿದರು.
ಇದೇ ವೇಳೆ ನಿವೃತ್ತಿ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಅವರು, ಇದು ನಿವೃತ್ತಿಯ ನಿರ್ಧಾರವಲ್ಲ. ನಾನು ರನ್ ಗಳಿಸುತ್ತಿಲ್ಲವಾದ ಕಾರಣ ಸದ್ಯ ಆಟದಿಂದ ಹೊರಗಿದ್ದೇನೆ.
ಜೀವನವು ಪ್ರತಿದಿನ ಬದಲಾಗುತ್ತದೆ. ಹೀಗಾಗಿ ಫಾರ್ಮ್ ಸಮಸ್ಯೆ ಶೀಘ್ರದಲ್ಲೇ ಸರಿ ಹೋಗುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಸದಾ ವಾಸ್ತವಕ್ಕೆ ಅನುಗುಣವಾದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.