ಭಾರತದ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ಮಧ್ಯದಲ್ಲೇ ಬುಧವಾರ ಅಶ್ವಿನ್ ನಿವೃತ್ತಿ ನಿರ್ಧಾರ ಪ್ರಕಟಿಸಿದರು.
ಆಫ್ ಸ್ಪಿನ್ನರ್ ಅಶ್ವಿನ್ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಖ್ಯಾತಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
ಅಶ್ವಿನ್ 106 ಟೆಸ್ಟ್ ಗಳಲ್ಲಿ 537 ವಿಕೆಟ್ ಪಡೆದಿದ್ದು ಅತೀ ಹೆಚ್ಚು ವಿಕೆಟ್ ಪಡೆದ ಅನಿಲ್ ಕುಂಬ್ಳೆ (619) ನಂತರದ ಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರೂ ಐಪಿಎಲ್ ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಅಶ್ವಿನ್ ಸ್ಪಷ್ಟಪಡಿಸಿದ್ದು, ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ.
38 ವರ್ಷದ ಅಶ್ವಿನ್ ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಪಿಂಕ್ ಬಾಲ್ ಟೆಸ್ಟ್ ಕೊನೆಯದಾಗಿದೆ. ಈ ಪಂದ್ಯದ ನಂತರ ಅಶ್ವಿನ್ ಅವರನ್ನು ಮೂರನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದ್ದು ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡಲಾಗಿತ್ತು.
ಬಿಳಿ ಚೆಂಡಿನಲ್ಲಿ ಅಶ್ವಿನ್ 181 ಪಂದ್ಯಗಳನ್ನು ಆಡಿದ್ದು, 228 ವಿಕೆಟ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 116 ಪಂದ್ಯಗಳನ್ನು ಆಡಿದ್ದು, 156 ವಿಕೆಟ್ ಪಡೆದಿದ್ದಾರೆ. ಒಂದು ಅರ್ಧಶತಕ ಸೇರಿದಂತೆ 707 ರನ್ ಗಳಿಸಿದ್ದಾರೆ. ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ 13ನೇ ಬೌಲರ್ ಆಗಿದ್ದಾರೆ.
೬೫ ಟಿ೨೦ ಪಂದ್ಯಗಲಲ್ಲಿ 72 ವಿಕೆಟ್ ಕಬಳಿಸಿದ್ದು, 8 ರನ್ ಗೆ 4 ವಿಕೆಟ್ ಪಡೆದಿದ್ದು ಅವರ ಗರಿಷ್ಠ ಸಾಧನೆಯಾಗಿದೆ. 19 ಪಂದ್ಯಗಳಲ್ಲಿ ಬ್ಯಾಟ್ ಬೀಸುವ ಅವಕಾಶ ಸಿಕ್ಕಿದ್ದು, 148 ರನ್ ಬಾರಿಸಿದ್ದಾರೆ.
ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ 287 ಪಂದ್ಯಗಳನ್ನು ಆಡಿದ್ದು, 765 ವಿಕೆಟ್ ಗಳಿಸಿದ್ದಾರೆ. ಅನಿಲ್ ಕುಂಬ್ಳೆ [953] ಮೊದಲ ಸ್ಥಾನದಲ್ಲಿದ್ದಾರೆ.