Wednesday, July 3, 2024
Google search engine
Homeಕ್ರೀಡೆಟಿ-20 ವಿಶ್ವಕಪ್: 68 ರನ್ನಿಂದ ಇಂಗ್ಲೆಂಡ್ ಸೋಲಿಸಿ ಟೀಂ ಇಂಡಿಯಾ ಫೈನಲ್ ಗೆ ಲಗ್ಗೆ

ಟಿ-20 ವಿಶ್ವಕಪ್: 68 ರನ್ನಿಂದ ಇಂಗ್ಲೆಂಡ್ ಸೋಲಿಸಿ ಟೀಂ ಇಂಡಿಯಾ ಫೈನಲ್ ಗೆ ಲಗ್ಗೆ

ಕ್ರಿಕೆಟ್ ಪಾಠ ಹೇಳಿಕೊಟ್ಟ ಬ್ರಿಟಿಷರನ್ನು ಸ್ಪಿನ್ ಬಲೆಗೆ ಕೆಡವಿದ ಭಾರತ ತಂಡ 68 ರನ್ ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿ ಟಿ-20 ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶಿಸಿದೆ.

ಗಯಾನದಲ್ಲಿ ಮಳೆಯ ಅಡ್ಡಿಯ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಸಂಪಾದಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ಇಂಗ್ಲೆಂಡ್ 16.3 ಓವರ್ ಗಳಲ್ಲಿ 103 ರನ್ ಗೆ ಆಲೌಟಾಯಿತು.

ಭಾರತ ತಂಡ ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಭಾನುವಾರ ಮೂರನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದು, 10 ವರ್ಷಗಳ ನಂತರ ಮೊದಲ ಬಾರಿ ಫೈನಲ್ ತಲುಪಿದೆ.

ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ರನ್ ಗಳಿಸಲು ಪರದಾಡಿದರು. ನಾಯಕ ಜೋಸ್ ಬಟ್ಲರ್ 15 ಎಸೆತಗಳಲ್ಲಿ 4 ಬೌಂಡರಿ ಸೇರಿದ 23 ರನ್ ಬಾರಿಸಿ ಸ್ಫೋಟಕ ಆರಂಭ ನೀಡಲು ಯತ್ನಿಸಿ ಅಕ್ಸರ್ ಬಲೆಗೆ ಬೀಳುತ್ತಿದ್ದಂತೆ ತಂಡ ನಾಟಕೀಯ ಕುಸಿತ ಅನುಭವಿಸಿತು.

ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ 19 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 25 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ ಮನ್ ಗಳಿಂದ ದೊಡ್ಡ ಕಾಣಿಕೆ ಬರಲಿಲ್ಲ.

ಭಾರತದ ಪರ ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್ ಕಬಳಿಸಿದರೆ, ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

ರೋಹಿತ್ ಅರ್ಧಶತಕ

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಸೂರ್ಯಕುಮಾರ್ ಉತ್ತಮ ಜೊತೆಯಾಟದಿಂದ ತಂಡವನ್ನು ಆಧರಿಸಿದರು.

ವಿರಾಟ್ ಕೊಹ್ಲಿ (9) ಮತ್ತು ರಿಷಭ್ ಪಂತ್ (4) ವಿಫಲರಾದ ನಂತರ ಜೊತೆಯಾದ ರೋಹಿತ್ ಮತ್ತು ಸೂರ್ಯಕುಮಾರ್ ಮೂರನೇ ವಿಕೆಟ್ ಗೆ 73 ರನ್ ಜೊತೆಯಾಟದಿಂದ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ರೋಹಿತ್ ಶರ್ಮ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 57 ರನ್ ಬಾರಿಸಿ 32ನೇ ಅರ್ಧಶತಕದ ಗೌರವಕ್ಕೆ ಪಾತ್ರರಾದರು. ಸೂರ್ಯಕುಮಾರ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 47 ರನ್ ಗಳಿಸಿದ್ದಾಗ ಔಟಾಗಿ 3 ರನ್ ಗಳಿಂದ ಅರ್ಧಶತಕದಿಂದ ವಂಚಿತರಾದರು.

ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 23 ರನ್ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾದರೆ, ರವೀಂದ್ರ ಜಡೇಜಾ 9 ಎಸೆತಗಳಲ್ಲಿ 17 ರನ್ ಗಳಿಸಿ ಔಟಾಗದೇ ಉಳಿದರು. ಅಕ್ಸರ್ ಪಟೇಲ್ 10 ರನ್ ಬಾರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments