ಬೆಂಗಳೂರು: ಕಾಳಸಂತೆಯಲ್ಲಿ ಎಲ್ ಪಿಜಿ ಮಾರಾಟ, ಸಂಗ್ರಹವಾಗದಂತೆ ಪೊಲೀಸ್, ಸಾರಿಗೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಗಮನ ಹರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.
ಗ್ಯಾಸ್ ಸಿಲಿಂಡರ್ ಅಭಾವದ ಆತಂಕ ಹಿನ್ನೆಲೆ ಹೋಟೆಲ್ ಮಾಲೀಕರ ಸಂಘದೊಂದಿಗೆ ಸಿಎಸ್ ವಿಧಾನಸೌಧದಲ್ಲಿ ಸಭೆ ನಡೆಸಿ ಸಮಾಲೋಚಿಸಿದರು. ಸಭೆಯಲ್ಲಿ ಆಹಾರ ಇಲಾಖೆ, ಸಾರಿಗೆ ಇಲಾಖೆ, ನಗರ ಪೊಲೀಸ್ ಕಮೀಷನರ್, ಅನಿಲ ಸರಬರಾಜು ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಚರ್ಚೆ ಬಳಿಕ ಸಿಎಸ್ ಶಾಲಿಜಿ ರಜನೀಶ್ ಕೆಲ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸದ್ಯ ಸರಬರಾಜಾಗುತ್ತಿರುವ ಸಿಲಿಂಡರ್‌ನಲ್ಲಿ ಶೇ 50ರಷ್ಟು ರಿಸರ್ವ್ ಮಾಡಿ ತಮಗೆ ಕೊಡಲು ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದರು. ಅಧಿಕೃತವಾಗಿ ಪತ್ರದ ಮೂಲಕ ಮನವಿ ಸಲ್ಲಿಸಿ ಪರಿಶೀಲನೆ ಮಾಡೋಣ ಎಂದು ಸಿಎಸ್ ಭರವಸೆ ನೀಡಿದರು. ಈ ವೇಳೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗೊಂದಲದಿಂದ ಸಂಗ್ರಹಿಸಿಡಲು ಹೆಚ್ಚುವರಿ ಸಿಲಿಂಡರ್ ಖರೀದಿಸದಂತೆ ಹೋಟೆಲ್‌ಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆ, ಪಿಜಿ ಗಳಿಗೆ ಗ್ಯಾಸ್ ಕೊರತೆಯಾಗದಂತೆ ಕ್ರಮ ವಹಿಸಬೇಕು. ಹೋಟೆಲ್‌ನವರು ಹೆಚ್ಚುವರಿ ಎಲ್ ಪಿಜಿ ಸಂಗ್ರಹಿಸಬಾರದು. ಕಾಳಸಂತೆಯಲ್ಲಿ ಮಾರಾಟ ಮತ್ತು ಸಂಗ್ರಹವಾಗದ ರೀತಿಯಲ್ಲಿ ತಡೆಯಬೇಕು. ಪೊಲೀಸ್, ಸಾರಿಗೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲು ಸೂಚಿಸಿದರು. ಮೂರು ಇಲಾಖೆಯೂ ಜಂಟಿಯಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು. ಇನ್ನು 25 ದಿನಗಳಿಗೆ ಯಾವುದೇ ತೊಂದರೆ ಇಲ್ಲ ಎಂದುಮಾಹಿತಿ ನೀಡಿರೋ ಶಾಲಿನಿ ರಜನೀಶ್, ಆಹಾರ ಇಲಾಖೆ ಮೂಲಕ ಹೆಲ್ಪ್ ಲೈನ್ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಭೆ ಬಳಿಕ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಮಾತನಾಡಿ, ಸಿಎಸ್ ಸಭೆ ಕರೆದಿದ್ದರು. ವಾಣಿಜ್ಯ ಎಲ್ ಪಿಜಿ ಸರಬರಾಜು ಸಂಪೂರ್ಣ ನಿಂತಿದೆ. ಸಿಎಸ್ ಉತ್ತಮ ಸಲಹೆಯನ್ನು ಕೊಟ್ಟಿದ್ದಾರೆ. ಸರಬರಾಜಿನಲ್ಲಿ 50% ಎಲ್ ಪಿಜಿ ಹೋಟೆಲ್ ಗೆ ಕೊಡುವಂತೆ ಮನವಿ ಮಾಡಿದ್ದೇವೆ. ಸಂಪೂರ್ಣ ಜಿರೋ ಮಾಡಬೇಡಿ ಎಂದಿದ್ದೇವೆ. ನಾಳೆ ಅಂಕಿಅಂಶ ಸಮೇತ ಪತ್ರ ಕೊಡಲು ಹೇಳಿದ್ದಾರೆ. ನಾವು ಕೇಂದ್ರ ಸರ್ಕಾರಕ್ಕೂ ಪತ್ರ ಕೊಡುತ್ತೇವೆ ಎಂದರು.
ಆದಷ್ಟು ಬೇಗ ಯುದ್ದ ನಿಲ್ಲಲಿ. ಶೇ.50 ಕಮರ್ಷಿಯಲ್ ಸಿಲಿಂಡರ್ ಕೊಡಬೇಕೆಂದು ಮನವಿ ಮಾಡ್ತಿದ್ದೇವೆ. ಎಲ್ಲಾ ರಾಜ್ಯದಲ್ಲಿಯೂ ಈ ಪರಿಸ್ಥಿತಿ ಇದೆ. ಕಮರ್ಷಿಯಲ್ ಸಿಲಿಂಡರ್ ಸರಬರಾಜು ಮಾಡುತ್ತಿಲ್ಲ. ಸಂಪೂರ್ಣ ಜಿರೋ ಮಾಡಿದ್ದಾರೆ ಎಂದರು.



