ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಸಿಡಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ ಟಿ-20 ವಿಶ್ವಕಪ್ ಟೂರ್ನಿ ಸೂಪರ್-8 ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡಕ್ಕೆ 180 ರನ್ ಗುರಿ ಒಡ್ಡಿದೆ.
ಬ್ರಿಡ್ಜ್ ಟೌನ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು.
ಬೃಹತ್ ಮೊತ್ತ ಗಳಿಸುವ ಉದ್ದೇಶದಿಂದ ಸ್ಫೋಟಕ ಆರಂಭಕ್ಕೆ ಇಳಿದ ಭಾರತ ತಂಡ ನಾಯಕ ರೋಹಿತ್ ಶರ್ಮ (8) ವಿಕೆಟ್ ಅಲ್ಪ ಮೊತ್ತಕ್ಕೆ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಎರಡನೇ ವಿಕೆಟ್ ಗೆ 43 ರನ್ ಜೊತೆಯಾಟದಿಂದ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಕೊಹ್ಲಿ 24 ಎಸೆತಗಳಲ್ಲಿ 1 ಸಿಕ್ಸರ್ ಸೇರಿದಂತೆ 24 ರನ್ ಬಾರಿಸಿದರೆ, ರಿಷಭ್ ಪಂತ್ 11 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 20 ರನ್ ಗಳಿಸಿದರು.
ಇವರಿಬ್ಬರ ನಿರ್ಗಮನದ ನಂತರ ಬಂದ ಶಿವಂ ದುಬೆ (10) ಮತ್ತೆ ವಿಫಲರಾದರು. ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ 5ನೇ ವಿಕೆಟ್ ಗೆ 60 ರನ್ ಜೊತೆಯಾಟದಿಂದ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು.
ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 53 ರನ್ ಬಾರಿಸಿ ಔಟಾದರೆ, ಪಾಂಡ್ಯ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 32 ರನ್ ಗಳಿಸಿದರು.
ಆಫ್ಘಾನಿಸ್ತಾನ ಪರ ಫಜತಕ್ ಫಾರೂಖಿ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಪಡೆದು ಭಾರತದ ಬೃಹತ್ ಮೊತ್ತದ ಆಸೆಗೆ ಬ್ರೇಕ್ ಹಾಕಿದರು.