ನಾಯಕ ರೋಹಿತ್ ಶರ್ಮ ಸಿಡಿಲಬ್ಬರದ ಆಟದಿಂದ ಭಾರತ ತಂಡ 24 ರನ್ ಗಳ ಭಾರೀ ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದು ಟಿ-20 ವಿಶ್ವಕಪ್ ನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ.
ಗ್ರಾಸ್ ಎಸ್ಲೆಟ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗೆಲುವಿನೊಂದಿಗೆ ಭಾರತ ತಂಡ ಗುಂಪು-1ರಲ್ಲಿ ಸತತ ಮೂರು ಗೆಲುವಿನೊಂದಿಗೆ ಸೋಲರಿಯದ ತಂಡವಾಗಿ ಸೆಮಿಫೈನಲ್ ಗೆ ಲಗ್ಗೆ ಹಾಕಿತು. ಆಸ್ಟ್ರೇಲಿಯಾ 3 ರಲ್ಲಿ 1 ಗೆಲುವು, 2 ಸೋಲಿನೊಂದಿಗೆ ಸೆಮಿಫೈನಲ್ ಹಾದಿ ದುರ್ಗಮವಾಗಿಸಿಕೊಂಡಿದೆ.
ಆಸ್ಟ್ರೇಲಿಯಾ ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ಟ್ರಾವಿಸ್ ಹೆಡ್ ಮತ್ತು ನಾಯಕ ಮಿಚೆಲ್ ಮಾರ್ಷ್ ಎರಡನೇ ವಿಕೆಟ್ ಗೆ 81 ರನ್ ಜೊತೆಯಾಟದಿಂದ ತಂಡದ ಪರ ಹೋರಾಟ ನಡೆಸಿದರು.
ಟ್ರಾವಿಡ್ ಹೆಡ್ 43 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 76 ರನ್ ಸಿಡಿಸಿದರೆ, ಮಿಚೆಲ್ ಮಾರ್ಷ್ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 37 ರನ್ ಗಳಿಸಿದರು. ನಂತರ ಭಾರತದ ಬೌಲರ್ ಗಳು ತಿರುಗೇಟು ನೀಡಿದ್ದರಿಂದ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ತಂಡ ಗೆಲುವಿನ ಹಾದಿಯಿಂದ ನಿರ್ಗಮಿಸಿತು.
ಭಾರತದ ಪರ ಅರ್ಷದೀಪ್ ಸಿಂಗ್ 3, ಕುಲದೀಪ್ ಯಾದವ್ 2 ವಿಕೆಟ್ ಪಡೆದು ಮಿಂಚಿದರು.
ರೋಹಿತ್ ಮಿಂಚು
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅವರನ್ನು ಶೂನ್ಯಕ್ಕೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ರೋಹಿತ್ ಶರ್ಮ ಸಿಡಿಲಬ್ಬರದ ಆಟದಿಂದ ಪಂದ್ಯದ ದಿಕ್ಕೇ ಬದಲಿಸಿದರು.
ರೋಹಿತ್ ಶರ್ಮ 41 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ನೊಂದಿಗೆ 92 ರನ್ ಸಿಡಿಸಿ ಭಾರತ ಬೃಹತ್ ಮೊತ್ತ ಪೇರಿಸಲು ನೆರವಾದರು. ಸೂರ್ಯಕುಮಾರ್ ಯಾದವ್ (31), ರಿಷಭ್ ಪಂತ್ (15), ಹಾರ್ದಿಕ್ ಪಾಂಡ್ಯ (ಅಜೇಯ 27), ಶಿವಂ ದುಬೆ (28) ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತ 200ರ ಗಡಿ ದಾಟಿಸಿದರು.