ಗ್ರಾಮದ ಉತ್ಸವದ ಸಂದರ್ಭದಲ್ಲಿ ನೀಡಲಾಗಿದ್ದ ಪ್ರಸಾದ ಸೇವಿಸಿದ ಮೂವರು ವಾಂತಿ ಭೇದಿಯಿಂದ ಮೃತಪಟ್ಟ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಸಂಭವಿಸಿದೆ.
ಮಧುಗಿರಿ ತಾಲೂಕಿನ ಬುಳಸಂದ್ರ ಗ್ರಾಮದಲ್ಲಿ ನಡೆದ ದೇವರ ಉತ್ಸವದ ವೇಳೆ ವಿತರಣೆ ಮಾಡಲಾಗಿದ್ದ ಪ್ರಸಾದ ಸೇವಿಸಿ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಿಸಲಾಗಿದ್ದ 11 ಮಂದಿಯಲ್ಲಿ ಮೂವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಗ್ರಾಮದ ನಿವಾಸಿಗಳಾದ 40 ವರ್ಷದ ತಿಪ್ಪಮ್ಮ, 85 ವರ್ಷದ ತಿಮ್ಮಕ್ಕ, 75 ವರ್ಷದ ಗಿರಿಯಮ್ಮ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಶ್ರಾವಣ ಶನಿವಾರ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮುತ್ತರಾಯಸ್ವಾಮಿ, ಕರಿಯಮ್ಮ ಭೂತಪ್ಪ ದೇವರ ಆರತಿ ಉತ್ಸವ ಆಯೋಜಿಸಲಾಗಿತ್ತು. ಉತ್ಸವದಲ್ಲಿ ಭಾಗಿಯಾಗಿದ್ದವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಸೇವಿಸಿದ ಪ್ರಸಾದದಿಂದಲೇ ಮೂವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಗ್ರಾಮಕ್ಕೆ ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಮೇಲ್ನೋಟಕ್ಕೆ ಇದು ಫುಡ್ ಪಾಯಿಸನ್ ನಿಂದಾಗಿ ಎಂದಿದ್ದಾರೆ. ಪ್ರಸಾದದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಸಿಲಾಗಿದ್ದು ವರದಿ ನಿರೀಕ್ಷಿಸಲಾಗುತ್ತಿದೆ.