ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ರಹಸ್ಯವಾಗಿ ಡ್ರಗ್ಸ್ ಲ್ಯಾಬ್ ನಡೆಸುತ್ತಿದ್ದ ಮಾಸ್ಟರ್ ಮೈಂಡ್ ಸೇರಿ ಮೂವರನ್ನು ಬಂಧಿಸಿರುವುದಾಗಿ ಎನ್ ಸಿಬಿ ತಿಳಿಸಿದೆ.
ಮೈಸೂರಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆಸಿದ ದಾಳಿ ಕುರಿತು ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಉದ್ದೀಪನಾ ನಿಗ್ರಹ ಘಟಕ ಮಾಸ್ಟರ್‌ಮೈಂಡ್ ಮಹೀಂದ್ರ ಕುಮಾರ್ ವಿಷ್ಣೋಯ್ ಹಾಗೂ ಉತ್ತರ ಪ್ರದೇಶದ ದಂಪತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
ಶುಚಿಗೊಳಿಸುವ ಉದ್ದೇಶಗಳಿಗಾಗಿ ರಾಸಾಯನಿಕಗಳನ್ನು ತಯಾರಿಸುವ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಘಟಕವನ್ನು ಆರೋಪಿ ಮತ್ತು ಮಾಸ್ಟರ್‌ಮೈಂಡ್ ಮಹೀಂದ್ರ ಕುಮಾರ್ ವಿಷ್ಣೋಯ್ ಅವರ ಸಂಬಂಧಿ ಬಾಡಿಗೆಗೆ ಪಡೆದಿದ್ದರು, ಆತನನ್ನು ಬಂಧಿಸಲಾಗಿದೆ. ರಹಸ್ಯ ಲ್ಯಾಬ್ಅನ್ನು ವಿಧಿವಿಜ್ಞಾನ ತಂಡವು ಪರೀಕ್ಷೆಗಾಗಿ ಸೀಜ್ ಮಾಡಿದೆ ಎಂದು ಎನ್‌ಸಿಬಿ ತನ್ನ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ 28.01.2026 ರಂದು ಗುಜರಾತ್‌ನ ಸೂರತ್ ಜಿಲ್ಲೆಯ ಪಲ್ಸಾನಾದಲ್ಲಿ ಕರ್ನಾಟಕ ನೋಂದಣಿ ಸಂಖ್ಯೆಯ ಟೊಯೋಟಾ ಫಾರ್ಚೂನರ್ ಎಸ್‌ಯುವಿಯನ್ನು ಎನ್‌ಸಿಬಿ ಅಧಿಕಾರಿಗಳು ತಡೆಹಿಡಿದು, ಪರಿಶೀಲನೆ ನಡೆಸಿದಾಗ ಸುಮಾರು 35 ಕೆ.ಜಿ ಮೆಫೆಡ್ರೋನ್ (MD) ಪತ್ತೆಯಾಗಿದೆ. ಇದಲ್ಲದೆ, ಪಲ್ಸಾನಾದ ದಾಸ್ತಾನ್ ರೆಸಿಡೆನ್ಸಿಯಲ್ಲಿರುವ ಮಾದಕವಸ್ತು ಜಾಲದ ಮಾಸ್ಟರ್‌ಮೈಂಡ್ ಮಹೀಂದ್ರ ಕುಮಾರ್ ವಿಷ್ಣೋಯ್ ಅವರ ಮನೆಯಲ್ಲಿ ನಡೆಸಿದ ಶೋಧದಲ್ಲಿ 1.8 ಕೆಜಿ ಅಫೀಮು, 25.6 ಲಕ್ಷ ರೂ. ನಗದು ಮತ್ತು ವಿವಿಧ ರಾಸಾಯನಿಕಗಳು ಪತ್ತೆಯಾಗಿವೆ. ಸೂರತ್ ಪೊಲೀಸರ ಸಹಾಯದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
ಮಾಸ್ಟರ್‌ಮೈಂಡ್ ಸೇರಿ ಮೂವರ ಬಂಧನ:
ರಾಜಸ್ಥಾನದಲ್ಲಿ ಮಾದಕ ವಸ್ತುವನ್ನು ಮಹೀಂದ್ರ ಕುಮಾರ್ ಮಾರಾಟ ಮಾಡುತ್ತಿದ್ದ. ಈ ಹಿಂದೆ ಅಫೀಮು ಮತ್ತು ಸ್ಮ್ಯಾಕ್ ಮಾರಾಟದಲ್ಲಿ ಭಾಗಿಯಾಗಿದ್ದ ಮಹೀಂದ್ರ ಕುಮಾರ್ ವಿಷ್ಣೋಯ್, ಎನ್‌ಡಿಪಿಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಇತರ ಕೈದಿಗಳೊಂದಿಗೆ ಮಾತನಾಡುವಾಗ ಸಿಂಥೆಟಿಕ್ ಡ್ರಗ್ಸ್ ತಯಾರಿಸುವ ಬಗ್ಗೆ ತಿಳಿದುಕೊಂಡಿರುವುದು ಎಂದು ತನಿಖೆಯಿಂದ ಗೊತ್ತಾಗಿದೆ.
ಜೈಲು ವಾಸದ ವೇಳೆ ಅವರು ಸಂಶ್ಲೇಷಿತ ಮಾದಕ ದ್ರವ್ಯಗಳ ಪ್ರಕ್ರಿಯೆಗಳು, ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆ ಸರಪಳಿಗಳೊಂದಿಗೆ ಪರಿಚಿತರಾದರು, ನಂತರ ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಮೈಸೂರಿನಲ್ಲಿ ರಹಸ್ಯ ಉತ್ಪಾದನಾ ಘಟಕವನ್ನು ಸ್ಥಾಪಿಸಿ ತಯಾರಿಕೆ ಮಾಡುತ್ತಿದ್ದರು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.



