ರೈಲು ಹಳಿಯ ಬೋಲ್ಟ್ ಗಳನ್ನು ಸಡಿಲಗೊಳಿಸಿ, ಅದನ್ನು ನಾವೇ ಪತ್ತೆ ಹಚ್ಚಿದೆವು ಎಂದು ನಾಟಕವಾಡಿದ ಮೂವರು ರೈಲ್ವೆ ಸಿಬ್ಬಂದಿ ಸಿಕ್ಕಿಬಿದ್ದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ರೈಲು ಹಳಿಯ ಬೋಲ್ಟ್ ಕಿತ್ತು ರೈಲು ಹಳಿ ತಪ್ಪಿಸುವ ಪ್ರಯತ್ನ ತಡೆದಿದ್ದೇವೆ ಎಂದು ಬಿಂಬಿಸಿಕೊಂಡು ರೈಲ್ವೆ ಇಲಾಖೆಯಿಂದ ಸನ್ಮಾನ ಮಾಡಿಕೊಂಡು ರಾತ್ರಿ ಪಾಳಿಯಲ್ಲೇ ಕೆಲಸ ಮುಂದುವರಿಸುವ ಉದ್ದೇಶದಿಂದ ಪ್ರಯಾಣಿಕರ ಜೀವವನ್ನೇ ಪಣಕ್ಕಿಟ್ಟ ರೈಲ್ವೆ ಸಿಬ್ಬಂದಿ ಈಗ ಕಂಬಿ ಎಣಿಸುತ್ತಿದ್ದಾರೆ.
ಸುಭಾಷ್ ಪೊದ್ದಾರ್ (39), ಮನೀಶ್ ಮಿಸ್ತ್ರಿ (28) ಮತ್ತು ಶುಭಂ ಜೈಸ್ವಾಲ್ (26) ಎಂಬ ಮೂವರು ಉದ್ಯೋಗಿಗಳು ರೈಲ್ವೆಯ ನಿರ್ವಹಣಾ ವಿಭಾಗದಲ್ಲಿ ಟ್ರ್ಯಾಕ್ ಮೆನ್‌ಗಳಾಗಿದ್ದು ಮೂವರನ್ನೂ ಬಂಧಿಸಲಾಗಿದೆ.
ಸೆಪ್ಟೆಂಬರ್ 21 ರಂದು ರೈಲುಗಳನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ ಫಿಶ್ ಪ್ಲೇಟ್‌ಗಳನ್ನು ತೆಗೆದುಹಾಕಿ ಮತ್ತು ಹಲವಾರು ಬೋಲ್ಟ್ ಗಳನ್ನು ಸಡಿಲಗೊಳಿಸಿ ದುಷ್ಕರ್ಮಿಗಳು ರೈಲ್ವೆ ಹಳಿಯನ್ನು ಹಾಳು ಮಾಡಿ ಅಪಘಾತ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಪ್ರಕರಣದ ತನಿಖೆ ನಡೆಸಿದ ಸೂರತ್ ಪೊಲೀಸರು ನಿಜಾಂಶ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ.
ರೈಲು ಹಳಿ ಬೋಲ್ಟ್ ತೆಗೆದ ಸಮಯದ ಬಗ್ಗೆ ಅನುಮಾನಗೊಂಡ ಪೊಲೀಸರು ಸೆಪ್ಟೆಂಬರ್ 21ರಂದು ಬೆಳಿಗ್ಗೆ 5.30ರ ಸುಮಾರಿಗೆ ಆರೋಪಿಗಳು ಘಟನೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸುವ ಮೊದಲು ಚಿತ್ರೀಕರಿಸಿದ್ದ ಫೋಟೋ ಮತ್ತು ವೀಡಿಯೊಗಳ ಸಮಯ ಗಮನಿಸುವ ಮೂಲಕ ಪ್ರಕರಣವನ್ನು ಬಯಲಿಗೆ ಎಳೆಯಲಾಗಿದೆ ಎಂದು ಸೂರತ್ ಎಸ್ಪಿ ವಿವರಿಸಿದ್ದಾರೆ.
ಮಳೆಗಾಲದ ರಾತ್ರಿ ಡ್ಯೂಟಿ ಮುಗಿಯುವ ಹಂತದಲ್ಲಿ ಪೊದ್ದಾರ್ ಎಂಬಾತ ಈ ಉಪಾಯ ಮಾಡಿದ್ದಾನೆ. ಇಲಾಖೆಯಿಂದ ಸನ್ಮಾನ ಸಿಗುವುದು ಹಾಗೂ ರಾತ್ರಿ ಪಾಳಿಯಲ್ಲಿ ಮುಂದುವರಿಯುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿ ಮೂವರು ಟ್ರಾಕ್ ಮೆನ್‌ಗಳು ತೀವ್ರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಜೋಯ್ಸರ್ ಹೇಳಿದ್ದಾರೆ.
ರಾತ್ರಿ ಪಾಳಿಯಲ್ಲಿದ್ದರೆ ಮರುದಿನ ಒಂದು ದಿನ ರಜೆ ಸಿಗುತ್ತದೆ. ಹೀಗಾಗಿ ಇದೇ ಶಿಫ್ಟ್ನಲ್ಲಿ ಕೆಲಸ ಮುಂದುವರಿಸುವ ಉದ್ದೇಶದಿಂದ ರೈಲು ಹಳಿ ಬೋಲ್ಟ್ ಬಿಚ್ಚಿರುವ ನಾಟಕವಾಡಿದ್ದಾರೆ. ಆದರೆ ಇದರ ಹಿಂದೆ ದೇಶದ್ರೋಹಿಗಳು, ಉಗ್ರರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.