ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧ 92 ಐವಿ ಫ್ಲೂಯೆಡ್ ಮಾದರಿಯ ವರದಿಯಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಾ ಅಂಶ ಕಂಡುಬಂದಿದೆ.
ರಾಜ್ಯದ ಐವಿ ಫ್ಲೂಯಿಡ್ ವರದಿಯಲ್ಲಿ ಅಸುರಕ್ಷಿತ ಎಂದು ಉಲ್ಲೇಖಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಈ ಬಗ್ಗೆ ಸಂಪೂರ್ಣ ವಿವರಣೆ ಕೇಳಿ ಕೇಂದ್ರದ ಡ್ರಗ್ ಕಂಟ್ರೋಲ್ ಇಲಾಖೆಗೆ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳದ ಕಂಪನಿಯು 192 ಬ್ಯಾಚ್‌ಗಳಲ್ಲಿ ಔಷಧಿ ಕಳಿಸಿತ್ತು. ಬಳಕೆ ಮಾಡುವುದಕ್ಕೆ ಶುರು ಮಾಡಿದ ಆರಂಭದಲ್ಲೇ ಐವಿ ರಿಂಗರ್ ಲ್ಯಾಕ್ಟೇಟ್ ಬಗ್ಗೆ ಶಂಕೆ ಎದ್ದಿತ್ತು. ಬಳಿಕ 22 ಬ್ಯಾಚ್‌ಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂಬ ವರದಿ ಹೊರಬಿದ್ದಿತ್ತು.
ಖುದ್ದು ರಾಜ್ಯದ ಡ್ರಗ್ ಕಂಟ್ರೋಲ್ ಐವಿ ರಿಂಗರ್ ಲ್ಯಾಕ್ಟೇಟ್ ಗುಣಮಟ್ಟ ಉತ್ತಮವಾಗಿಲ್ಲ ಎನ್ನುವ ವರದಿ ಕೊಟ್ಟಿತ್ತು. ನಂತರ ಐವಿ ರಿಂಗ್ ಬಳಸಬೇಡಿ ಎಂದು ತಡೆಹಿಡಿದು ಎಲ್ಲ ಆಸ್ಪತ್ರೆಗಳಿಗೂ ಸುತ್ತೋಲೆ ಹೊರಡಿಸಿತ್ತು. ಪಶ್ಚಿಮ ಬಂಗಾಳದಿಂದ ಬಂದಿದ್ದ ಅಷ್ಟು ಬ್ಯಾಚ್‌ಗಳಿಗೆ ಬ್ರೇಕ್ ಹಾಕಿ, ಬಳಿಕ ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೆ ಕೇಂದ್ರ ಡ್ರಗ್ ಲ್ಯಾಬ್‌ನಲ್ಲಿ ಇದೇ ಔಷಧಿಯ 22 ಬ್ಯಾಚ್‌ಗಳು ಪಾಸ್ ಆಗಿವೆ ಎನ್ನಲಾಗಿದೆ.
ಕೇಂದ್ರ ಡ್ರಗ್ ಲ್ಯಾಬ್ ನೀಡಿದ್ದ ಪಾಸಿಟಿವ್ ವರದಿಯನ್ನೇ ಪಶ್ಚಿಮ ಬಂಗಾಳದ ಕಂಪನಿ ರಾಜ್ಯದ ಔಷಧಿ ನಿಗಮದ ಮುಂದಿಟ್ಟಿತ್ತು. ನಿಯಮಗಳ ಪ್ರಕಾರ ಸೆಂಟ್ರಲ್ ಡ್ರಗ್ ಲ್ಯಾಬ್‌ನಲ್ಲಿ ವರದಿ ಅಂತಿಮ. ಹೀಗಾಗಿ ಟೆಂಡರ್ ರೂಲ್ಸ್ ಪ್ರಕಾರ ಕಂಪನಿಯ ದ್ರಾವಣ ನಿರಾಕರಿಸುವಂತಿಲ್ಲ ಎಂದು ತಿಳಿದುಬಂದಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿರುವ ಕೇಂದ್ರದ ಲ್ಯಾಬ್‌ಗೆ ಸ್ಯಾಂಪಲ್ಸ್ ರವಾನೆ ಮಾಡಲಾಗಿದ್ದು, ಅದರ ವರದಿ ಡಿಸೆಂಬರ್ 9ರಂದು ಬರಲಿದೆ.
ಮುಖ್ಯಸ್ಥರ ನೇಮಕ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ ಆಡಳಿತಾತ್ಮಕ ಮುಖ್ಯಸ್ಥರನ್ನು ನೇಮಕ ಮಾಡಿದೆ.
ಪ್ರಕರಣ ಬಳಿಕ ಮುಂದಿನ ಆದೇಶದವರೆಗೂ ಆಹಾರ ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಅವರನ್ನು ಔಷಧ ನಿಯಂತ್ರಣ ಇಲಾಖೆಗೆ ಆಡಳಿತಾತ್ಮಕ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.