14 ವರ್ಷದ ಯುವ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ ಸಿಡಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಕದಿನ ಏಷ್ಯಾಕಪ್ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ವಿರುದ್ಧ 434 ರನ್ ಗಳ ಅಗಾಧ ಮೊತ್ತ ಪೇರಿಸಿದೆ.
ದುಬೈನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 433 ರನ್ ಸಂಪಾದಿಸಿದೆ.
ಭರ್ಜರಿ ಫಾರ್ಮ್ ನಲ್ಲಿರುವ ಭಾರತ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ 56 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದರು. ಅತ್ಯಂತ ವೇಗದ ಶತಕ ಹಾಗೂ ಅತಿ ಕಿರಿಯ ವಯಸ್ಸಿನಲ್ಲಿ ಗರಿಷ್ಠ ರನ್ ಬಾರಿಸಿದ ಎರಡು ವಿಶ್ವದಾಖಲೆ ಬರೆದರೂ ಅಧಿಕೃತವಾಗಿ ದಾಖಲೆ ಪುಟಕ್ಕೆ ಸೇರ್ಪಡೆ ಆಗಲಿಲ್ಲ.
ಸೂರ್ಯವಂಶಿ 95 ಎಸೆತಗಳಲ್ಲಿ 9 ಬೌಂಡರಿ ಮತ್ತು 14 ಸಿಕ್ಸರ್ ಒಳಗೊಂಡ 171 ರನ್ ಸಿಡಿಸಿದರು. ಏರಾನ್ ಜಾರ್ಜ್ 73 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 69 ರನ್ ಹಾಗೂ ವಿಹಾನ್ ಮಲ್ಹೋತ್ರಾ 55 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿ ಉತ್ತಮ ಬೆಂಬಲ ನೀಡಿದರು.
ಕೆಳ ಕ್ರಮಾಂಕದಲ್ಲಿ ವೇದಾಂತ್ ತ್ರಿವೇದಿ (38) ಮತ್ತು ಅಭಿಜ್ಯಾನ್ ಕುಂದ್ (32) ಮತ್ತು ಕಾನಿಷ್ಕ್ ಚೌಹಾಣ್ (28) ತಂಡದ ಮೊತ್ತ 400ರ ಗಡಿ ದಾಟಿಸಲು ನೆರವಾದರು. ಯುಎಇ ಪರ ಯುಗ್ ಶರ್ಮ ಮತ್ತು ಉದಿತ್ ಶೌರಿ ತಲಾ 2 ವಿಕೆಟ್ ಪಡೆದರು.



