ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ 4 ವಿಕೆಟ್ ಗಳಿಂದ ತಮಿಳುನಾಡು ತಂಡವನ್ನು ಸೋಲಿಸಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ಅಹಮದಾಬಾದ್ ನಲ್ಲಿ ಸೋಮವಾರ ನಡೆದ ಎ ಗುಂಪಿನ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡ ಅಭಿಲಾಷ್ ಶೆಟ್ಟಿ ಮಾರಕ ದಾಳಿಗೆ ತತ್ತರಿಸಿ 49.5 ಓವರ್ ಗಳಲ್ಲಿ 288 ರನ್ ಗೆ ಆಲೌಟಾಯಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಕರ್ನಾಟಕ ತಂಡ 47.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಕರ್ನಾಟಕ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಮೂವರು ಬ್ಯಾಟ್ಸ್ ಮನ್ ಗಳು ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು. ನಾಯಕ ಮಯಂಕ್ ಅಗರ್ವಾಲ್ 77 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 58 ರನ್ ಬಾರಿಸಿದರು. ಆದರೆ ಸತತ ಎರಡು ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ (22), ಕರುಣ್ ನಾಯರ್ (17), ರವಿಚಂದ್ರನ್ ಸಮ್ರನ್ (15) ವಿಫಲರಾದರು. ಇದರಿಂದ ತಂಡ ಒತ್ತಡಕ್ಕೆ ಒಳಗಾಗಿತ್ತು.
ಈ ಹಂತದಲ್ಲಿ ಜೊತೆಯಾದ ಕೃಷ್ಣನ್ ಶ್ರೀಜಿತ್ ಮತ್ತು ಶ್ರೇಯಸ್ ಗೋಪಾಲ್ 116 ರನ್ ಜೊತೆಯಾಟದಿಂದ ಹೋರಾಟ ನಡೆಸಿದರು. ಶ್ರೀಜಿತ್ 78 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 77 ರನ್ ಬಾರಿಸಿದರೆ, ಶ್ರೇಯಸ್ ಗೋಪಾಲ್ 47 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 55 ರನ್ ಗಳಿಸಿದರು.
ಅಭಿನವ್ ಮನೋಹರ್ 9 ಎಸೆತಗಳಲ್ಲಿ 20 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ತಮಿಳುನಾಡು ತಂಡದ ಪರ ನಾಯಕ ನಾರಾಯಣ್ ಜಗದೀಶನ್ (65) ಮತ್ತು ಪ್ರದೋಶ್ ರಂಜನ್ ಪಾಲ್ (57) ವೈಯಕ್ತಿಕ ಅರ್ಧಶತಕಗಳನ್ನು ಬಾರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಆದರೆ ಅಭಿಲಾಷ್ ಶೆಟ್ಟಿ ಮಾರಕ ದಾಳಿಗೆ ತತ್ತರಿಸಿ ನಾಟಕೀಯ ಕುಸಿತ ಅನುಭವಿಸಿದ ತಮಿಳುನಾಡು 300ರ ಗಡಿ ಹೊಸ್ತಿಲಲ್ಲಿ ಎಡವಿತು. ಅಭಿಲಾಷ್ 4 ವಿಕೆಟ್ ಪಡೆದು ಮಿಂಚಿದರು.



