ಮಗಳನ್ನು ಲಾಲಿ ಹಾಡಿ ಮಲಗಿಸಿ, ಗಾಳಿಯಲ್ಲಿ ಸುತ್ತಾಡೋಣ ಅಂತ ಕರೆದುಕೊಂಡು ಹೋದ ತಾಯಿ 3 ವರ್ಷದ ಕಂದಮ್ಮನನ್ನು ಕೆರೆಗೆ ಎಸೆದು ಮಗು ಕಾಣೆಯಾಗಿದ್ದಾಳೆ ಎಂದು ನಾಟಕವಾಡಿದ ಮನಕಲಕುವ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.
ಅಜ್ಮರ್ ನ ಭಜರಂಗ್ ಗಜ್ ನ ವೈಶಾಲಿ ನಗರದ ಬಳಿ ಮಹಿಳೆ ಮತ್ತು ಪುರುಷ ಇಬ್ಬರೂ ಓಡಾಡುವುದನ್ನು ಗಮನಿಸಿದ ಹೆಡ್ ಕಾನ್ ಸ್ಟೇಬಲ್ ಗೋವಿಂದ್ ಶರ್ಮ ವಿಚಾರಿಸಿದಾಗ ಅಂಜಲಿ ಎಂದು ಪರಿಚಯಿಸಿಕೊಂಡ ಮಹಿಳೆ, ರಾತ್ರಿ ಸುತ್ತಾಡಲು ಮಗಳ ಜೊತೆ ಬಂದಿದ್ದೆ. ದಿಢೀರನೆ ಆಕೆ ಕಾಣೆಯಾಗಿದ್ದು ಹುಡುಕುತ್ತಿದ್ದೇವೆ. ಇನ್ನೂ ಸಿಕ್ಕಿಲ್ಲ ಎಂದು ಹೇಳಿದಳು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಣೆಯಾದ ಮಗುವಿನ ಶೋಧ ಕಾರ್ಯ ನಡೆಸುವ ಜೊತೆ ವಿಚಾರಣೆ ನಡೆಸಿದಾಗ ಅಂಜಲಿ ಎಂದು ಹೇಳಿಕೊಂಡ ಮಹಿಳೆಯ ನಿಜವಾದ ಹೆಸರು ಪ್ರಿಯಾ ಎಂಬುದು ತಿಳಿಯಿತು.
ಅನುಮಾನಗೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳ ಮೊರೆ ಹೋದಾಗ ಅಂಜಲಿ ಮಗುವನ್ನು ಎತ್ತಿಕೊಂಡು ಆನಾ ಸಾಗರ್ ಕೆರೆಯ ಬಳಿ ಹೋಗುತ್ತಿರುವುದು ಕಂಡು ಬಂದಿತು. ರಾತ್ರಿ 1.30ರ ಸುಮಾರಿಗೆ ಆಕೆ ಒಬ್ಬಳೇ ಇದ್ದಿದ್ದು, ಮಗು ಇರಲಿಲ್ಲ. ಅಲ್ಲದೇ ಆಕೆ ಫೋನ್ ನಲ್ಲಿ ಯಾರೊಂದಿಗೋ ದೀರ್ಘ ಸಮಯ ಮಾತನಾಡುತ್ತಿದ್ದುದು ಕಂಡು ಬಂದಿತು.
ಮಾರನೇ ದಿನ ಮಗುವಿನ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಅಂಜಲಿಯನ್ನು ವಿಚಾರಿಸಿದಾಗ ತಾನೇ ಮಗುವನ್ನು ಕೆರೆಗೆ ಎಸೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಪತಿಯಿಂದ ದೂರವಾಗಿದ್ದಅಂಜಲಿ ಅಲ್ಕೇಶ್ ಎಂಬಾತನ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಳು. ಮೊದಲ ಪತಿಯಿಂದ ಪಡೆದ ಮಗುವಿನ ಕುರಿತು ಅಲ್ಕೇಶ್ ಪದೇಪದೆ ರೇಗಿಸುತ್ತಿದ್ದ. ಆತನಿಗೆ ಮಗು ಇಷ್ಟವಾಗದ ಕಾರಣ ಮಗುವನ್ನು ಕೊಲೆ ಮಾಡಲು ಆಕೆ ನಿರ್ಧರಿಸಿದ್ದಳು.
28 ವರ್ಷದ ಅಂಜಲಿ ಉತ್ತರ ಪ್ರದೇಶದ ವಾರಣಾಸಿ ಮೂಲದವಳಾಗಿದ್ದು, ಗಂಡನಿಂದ ದೂರವಾದ ಮೇಲೆ ಪ್ರಿಯಕರನ ಜೊತೆ ಅಜ್ಮೇರ್ ಗೆ ಸ್ಥಳಾಂತರಗೊಂಡಿದ್ದಳು. ಪ್ರಿಯಕರ ಕೆಲಸ ಮಾಡುತ್ತಿದ್ದ ಹೋಟೆಲ್ ನಲ್ಲಿಯೇ ಅಂಕಲಿ ರಿಸಪಶ್ಷನಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದಳು.
ಕೊಲೆ ಪ್ರಕರಣದಲ್ಲಿ ಪ್ರಿಯಕರನ ಪಾತ್ರ ಕಂಡು ಬಾರದೇ ಇದ್ದರೂ ಆತನ ಸಹಕಾರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.



