ದಾವಣಗೆರೆ: ಅತಿ ಕಡಿಮೆ ಅವಧಿಯಲ್ಲೇ ಹಣವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ನೋವಾಬೀಟ್ ಇನ್’ ಆ್ಯಪ್ ಆಧಾರಿತ ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಿನಲ್ಲಿ ದಾವಣಗೆರೆಯಲ್ಲಿ 10,000ಕ್ಕೂ ಅಧಿಕ ಜನರಿಗೆ ವಂಚನೆ ನಡೆದಿದೆ.
ವಂಚನೆಗೆ ಒಳಗಾದವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ನೋವಾಬೀಟ್ ಇನ್’ ಆ್ಯಪ್ ಆಧಾರಿತ ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಿನಲ್ಲಿ ಬಹುಕೋಟಿ ರೂಪಾಯಿ ವಂಚನೆ ನಡೆದಿದ್ದು, ಬಡವರು, ಮಧ್ಯಮ ವರ್ಗದವರು ಮತ್ತು ಅಲ್ಪಸಂಖ್ಯಾತ ಮಹಿಳೆಯರನ್ನೇ ಟಾರ್ಗೆಟ್ ಮಾಡಲಾಗಿದೆ.
10,000 ರೂಪಾಯಿ ಹೂಡಿಕೆ ಮಾಡಿದರೆ ಪ್ರತಿದಿನ 300 ರೂ. ಲಾಭ ಸಿಗುತ್ತದೆ ಎಂಬ ಸುಲಭ ಆದಾಯದ ಆಸೆ ತೋರಿಸುವ ಮೂಲಕ ನಂಬಿಸಲಾಗುತ್ತಿತ್ತು. ಮೋಸ ಹೋದವರು ಯುಪಿಐ ಐಡಿ ಹಾಗೂ ಆನ್‌ಲೈನ್ ಟ್ರಾನ್ಸಾಕ್ಷನ್ ಮೂಲಕ ನೋವಾಬೀಟ್ ಇನ್ ಆ್ಯಪ್ ಅಪ್ಲಿಕೇಶನ್‌ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ
ಆ್ಯಪ್‌ನ ಡಿಜಿಟಲ್ ವಾಲೆಟ್‌ನಲ್ಲಿ ದಿನೇ ದಿನೆ ಹಣದ ಮೊತ್ತ ಹೆಚ್ಚಾಗುತ್ತಿರುವುದು ಕಾಣಿಸುತ್ತಿತ್ತು. ಇದನ್ನು ನಿಜವಾದ ಬ್ಯಾಂಕ್ ಬ್ಯಾಲೆನ್ಸ್ ಎಂದೇ ನಂಬಿದ್ದ ಜನರು ಮತ್ತಷ್ಟು ಹಣ ಹೂಡಿಕೆ ಮಾಡಿದ್ದಾರೆ. ಸಾವಿರದಲ್ಲಿ ಹೂಡುತ್ತಿದ್ದವರು ಲಕ್ಷದಲ್ಲಿ ಹೂಡಲು ಆರಂಭಿಸಿದ್ದರು.
ಜೊತೆಗೆ ಹೆಚ್ಚು ಲಾಭ ಗಳಿಸುವ ದುರಾಸೆಯಿಂದ ಜನರು ಒಬ್ಬರ ಕೆಳಗೆ ಮತ್ತೊಬ್ಬರಂತೆ ತಮ್ಮ ಕುಟುಂಬದವರು, ಸ್ನೇಹಿತರು ಮತ್ತು ನೆರೆಹೊರೆಯವರನ್ನೆಲ್ಲಾ ಈ ಜಾಲಕ್ಕೆ ಸೇರಿಸಿದ್ದಾರೆ. ಅನೇಕ ಬಡ ಮಹಿಳೆಯರು ಚಿನ್ನಾಭರಣಗಳನ್ನು ಅಡವಿಟ್ಟು, ಖಾಸಗಿಯಾಗಿ ಕೈಸಾಲ ಮಾಡಿ 10 ಸಾವಿರದಿಂದ ಹಿಡಿದು 5 ಲಕ್ಷ ರೂಪಾಯಿಗೂ ಅಧಿಕ ಹಣ ಹೂಡಿಕೆ ಮಾಡಿದ್ದಾರೆ.
ಆ್ಯಪ್‌ನಲ್ಲಿ ಲಕ್ಷಾಂತರ ರೂಪಾಯಿ ಡಿಜಿಟಲ್ ಬ್ಯಾಲೆನ್ಸ್ ತೋರಿಸುತ್ತಿದ್ದರೂ, ಅದನ್ನು ತಮ್ಮ ನಿಜವಾದ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಹೋದಾಗ ತಾಂತ್ರಿಕವಾಗಿ ಸಾಧ್ಯವಾಗಲಿಲ್ಲ. ಹಣ ಕೈಗೆ ಸಿಗದೇ ಇದ್ದಾಗ ಮತ್ತು ಆ್ಯಪ್ ಸಂಪೂರ್ಣವಾಗಿ ಸ್ಥಗಿತಗೊಂಡಾಗ ಜನರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ತಕ್ಷಣ ಜನ ದಾವಣಗೆರೆಯ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
ಮಹಾ ವಂಚನೆಯ ಹಿಂದೆ ದಾವಣಗೆರೆಯ ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿ ಸೇರಿದಂತೆ ಪ್ರಮುಖರ ಕೈವಾಡವಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಈಗಾಗಲೇ ಮೂವರ ವಿರುದ್ಧ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಕೆಯಾಗಿದೆ. ಅಂದಾಜು ಕೋಟಿಗೂ ಅಧಿಕ ಮೊತ್ತದ ವಂಚನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ, ತಾಂತ್ರಿಕ ಪುರಾವೆಗಳನ್ನು ಆಧರಿಸಿ ತನಿಖೆ ತೀವ್ರಗೊಳಿಸಿದ್ದಾರೆ.
ಹಣ ಕಳೆದುಕೊಂಡ ಸಾದೀಕ್ ಎಂಬುವರು ಮಾತನಾಡಿ, “ನಾನು 5.50 ಲಕ್ಷ ರೂ ಕಳೆದುಕೊಂಡಿದ್ದೇನೆ. ತಿಂಗಳ ಆದಾಯ ಚೆನ್ನಾಗಿದೆ, ಸೇರಿ ಸೇರಿ ಎಂದು ದುಂಬಾಲು ಬಿದ್ದಿದ್ದರು. ಮನೆಯಲ್ಲಿ ಕೂತು ಕೆಲಸ ಮಾಡಿ ಹಣ ಮಾಡಬಹುದು ಎಂದು ಒತ್ತಡ ಹಾಕಿ ಹಣ ಹಾಕಿಸಿದ್ದರು. ಆರಂಭದಲ್ಲಿ 10 ಸಾವಿರ ಹೂಡಿಕೆ ಮಾಡಿದೆವು.
ಆರಂಭದಲ್ಲಿ ಹಣ ಕೊಟ್ರು, ಆ್ಯಪ್ ಆ್ಯನಿವರ್ಸರಿ ಇದೆ ಎಂದು 30 ಸಾವಿರ, 1 ಲಕ್ಷ ಹಾಕಿದ್ರೆ ಡಬಲ್ ಆಗುತ್ತದೆ ಎಂದು ಲಕ್ಷ ಲಕ್ಷ ಹಣ ಹಾಕಿಸಿದರು. ಹೂಡಿಕೆ ಮಾಡಿದ ಹಣ ವಿತ್ ಡ್ರಾ ಆಗದೆ ಬ್ಲಾಕ್ ಮಾಡಿ ಮೋಸ ಮಾಡಿದ್ದಾರೆ. ಆರಂಭದಲ್ಲಿ ಹತ್ತು ಸಾವಿರಕ್ಕೆ ದಿನ ಮುನ್ನೂರು ರೂಪಾಯಿ ಲಾಭವನ್ನು ಮೂರ್ನಾಲ್ಕು ತಿಂಗಳು ನಮಗೆ ಕೊಟ್ಟರು. ನಾವು ಮೋಸ ಹೋಗಿರುವುದು ಮಾರ್ಚ್ ತಿಂಗಳಲ್ಲಿ ಗೊತ್ತಾಯಿತು” ಎಂದು ಹೇಳಿದರು.
“ದಾವಣಗೆರೆಯಲ್ಲಿ ಒಟ್ಟು 13 ಸಾವಿರ ಜನ ಸೇರಿದ್ದೆವು. ಸಾಲ ಮಾಡಿ ಹಣ ತಂದು ಹಾಕಿ ಮೋಸ ಹೋಗಿದ್ದೇವೆ. ಗ್ರೂಪ್ ಮಾಡಿ ‘ನೋವಾಬೀಟ್ ಇನ್’ ಆ್ಯಪ್‌ನಲ್ಲಿ ಮೆಸೇಜ್ ಹಾಕಿ, ಕಳಿಸಿದ್ದ ಲಿಂಕ್ ಮೂಲಕ ಟ್ರೇಡಿಂಗ್ ಮಾಡಿಸುತ್ತಿದ್ದರು. ಬಿಟ್ ಕಾಯಿನ್ ಖರೀದಿ ಮಾಡೋದು ಸೇಲ್ ಮಾಡೋದು ಮಾಡಿಸುತ್ತಿದ್ದರು.
ಕೆಲ ತಿಂಗಳ ಕಾಲ ಚೆನ್ನಾಗಿ ನಡೆಯಿತು. ಬಳಿಕ ಆ್ಯನಿವರ್ಸರಿ ಆಫರ್ ಇದೆ ಎಂದು ಹಣ ಹಾಕ್ಸಿ ಎಲ್ಲಾ ಬ್ಲಾಕ್ ಮಾಡಿಬಿಟ್ಟರು. ಒಟ್ಟು ಐದು ಜನ ಆರೋಪಿಗಳಿದ್ದಾರೆ. ಅದರಲ್ಲಿ ದಾವಣಗೆರೆ ನಗರದ ಮೂರು ಜನರಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಇದರ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರ ದಾಖಲು ಮಾಡಿದ್ದೇೆವೆ” ಎಂದು ತಿಳಿಸಿದರು.
ಮೋಸ ಹೋದ ಗುಲಾಬ್ ಎಂಬವರು ಮಾತನಾಡಿ, “ಕೆಲವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೋಸ ಮಾಡಿದವರನ್ನು ಬಿಟ್ಟರೆ ಮತ್ತೊಂದು ಮೋಸ ಮಾಡುವ ಸಂಭವ ಹೆಚ್ಚಿರಲಿದೆ. ವಂಚಕರು ನಮಗೆ ಲಿಂಕ್ ಕಳಿಸುತ್ತಿದ್ದರು. ನಾವು ಲಾಭದ ಆಸೆಗೆ ಯುಪಿಐ ಟ್ರಾನ್ಸಾಕ್ಷನ್ ಬ್ಯಾಂಕ್ ಮೂಲಕ 10 ಸಾವಿರ ಹಾಕಿದ್ದೆವು. ನಮಗೆ ಮೋಸ ಮಾಡಿದವರಿಗೆ ಯಾವುದೇ ಕಾರಣಕ್ಕೂ ಬೇಲ್ ಸಿಗಬಾರದು” ಎಂದು ಮನವಿ ಮಾಡಿದರು.
ದಾವಣಗೆರೆ ಎಸ್ಪಿ ಶೇಖರ್ ಹೆಚ್.ಟಿ. ಅವರು ಮಾತನಾಡಿ, “ಈ ಸಂಬಂಧ ಸೈಬರ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 4ರಂದು ಪ್ರಕರಣ ದಾಖಲಾಗಿದೆ. ಆ್ಯಪ್ ಮೂಲಕ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಹಣ ಕ್ರೂಢೀಕರಿಸಿಕೊಂಡು ವಂಚನೆ ಮಾಡಿರುವ ಪ್ರಕರಣ ಇದಾಗಿದೆ. ವಂಚಕರು ಟೆಲಿಗ್ರಾಂನಲ್ಲಿ ಸೇರಿ ಗ್ರೂಪ್ ರಚಿಸಿ, ಚರ್ಚಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಹತ್ತು ಸಾವಿರದಿಂದ ಹೂಡಿಕೆ ಮಾಡಿಸಿದ್ದಾರೆ” ಎಂದು ತಿಳಿಸಿದರು.
“ಜಿಎಸ್ಸಿ, ಐಟಿ, ಪ್ರೋಸೆಸಿಂಗ್ ಫೀ ಎಂದು ಹೇಳಿ ಹೂಡಿಕೆ ಮಾಡಿದ ಹಣ ನೀಡದೆ ಮೋಸ ಮಾಡಲಾಗಿದೆ. ಇಲ್ಲಿ ತನಕ 46 ಜನ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇಲ್ಲಿಯತನಕ 20 ಬ್ಯಾಂಕ್ ಅಕೌಂಟ್ಗಳನ್ನು ಪತ್ತೆ ಹಚ್ಚಿ ಫ್ರೀಜ್ ಮಾಡಲಾಗಿದೆ. ಇಲ್ಲಿ ತನಕ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಐವರ ಪೈಕಿ ಮೂರು ಜನ ಸ್ಥಳೀಯರು, ಓರ್ವ ಹೊರ ರಾಜ್ಯದವನು. ಈ ಇಪ್ಪತ್ತು ಬ್ಯಾಂಕ್ ಖಾತೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಕಂಡುಬಂದಿವೆ. ಹಣ ಟ್ರಾನ್ಸಾಕ್ಷನ್ ಮಾಡಿರುವುದು, ಬ್ಯಾಂಕ್ ಮಾಹಿತಿ ಪಡೆದು ಪತ್ತೆ ಕಾರ್ಯ ಮುಂದುವರೆದಿದೆ.
ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಆನ್‌ಲೈನ್ ಅಪ್ಲಿಕೇಶನ್ ಮೂಲಕ ಯಾರು ಎಷ್ಟು ಹೂಡಿಕೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದೇವೆ. ಮೋಸ ಹೋದವರು ಸೂಕ್ತ ದಾಖಲೆ ನೀಡಿ ತನಿಖೆಗೆ ಸಹಕರಿಸಬೇಕಾಗಿದೆ. ಈ ರೀತಿಯ ಆನ್‌ಲೈನ್ ಹೂಡಿಕೆ, ಡಿಜಿಟಲ್ ಅರೆಸ್ಟ್, ಮುಂತಾದ ಫ್ರಾಡ್ಗಳಿಂದ ಜನ ದೂರ ಇರಬೇಕು. ನಮ್ಮ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.



