2 ಕೋಟಿ ರೂ. ವಿಮೆ ಹಣ ಪಡೆದು ಪ್ರಿಯಕರನ ಜೊತೆ ಸುಖ ಜೀವನ ನಡೆಸಲು ಪತ್ನಿ ಗಂಡನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮೇ 22ರಂದು ಹಾಜಿಪುರ ಮಂಡಲದ ಗುಡಿಪೇಟೆಯ ಸೈನಿ ಕುಮಾರ್ (45) ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ತೀವ್ರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ಕರೀಂನಗರ ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದರು.
ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು. ವಿಚಾರಣೆ ವೇಳೆ ಪತ್ನಿಯೇ ಸುಮಾರು 1 ವರ್ಷ ಕಾಲ ಸಂಚು ರೂಪಿಸಿ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಸೈನಿ ಕುಮಾರ್ ಅವರ ಪತ್ನಿ ಭಾರತಿ ಗುಡಿಪೇಟೆಯ ಲಗಿಸೆಟ್ಟಿ ಸುರೇಂದರ್ ಎಂಬವನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಇದಕ್ಕೆ ಅಡ್ಡಿಯಾಗಿದ್ದ ಪತಿ ಕುಮಾರ್ನನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದಳು. ಪತಿ ಎಲ್‌ಐಸಿ ಸೇರಿದಂತೆ ಹಲವು ವಿಮಾ ಕಂಪನಿಗಳಲ್ಲಿ ಪ್ರೀಮಿಯಂ ಪಾವತಿಸುತ್ತಿದ್ದರಿಂದ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ತನಗೆ 2 ಕೋಟಿ ರೂಪಾಯಿ ಸಿಗುತ್ತದೆ ಎಂದು ಯೋಜನೆ ರೂಪಿಸಿದ್ದಳು.
ಕುಮಾರ್ ಗುಡಿಪೇಟೆಯ ರಾಮ್ ಮಲ್ಲೇಶ್ ಅವರಿಂದ 60 ಸಾವಿರ ರೂ ಹಣ ಪಡೆದು ಪಾವತಿಸಿರಲಿಲ್ಲ. ಈ ವ್ಯವಹಾರದಲ್ಲಿ ಮಲ್ಲೇಶ್ ಕುಮಾರ್‌ಗೆ ಭಾರತಿ ಪರಿಚಯವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಭಾರತಿ, ಮಲ್ಲೇಶ್ಗೆ ಪತಿಯನ್ನು ಕೊಂದರೆ 10 ಲಕ್ಷ ರೂ ನೀಡುವುದಾಗಿ ತಿಳಿಸಿ, ಮುಂಗಡ 2 ಲಕ್ಷ ರೂಪಾಯಿ ಹಣವನ್ನೂ ಕೊಟ್ಟಿದ್ದಳು. ಮಲ್ಲೇಶ್ ಮಂಚೇರಿಯಲ್‌ನ ಎಲ್‌ಐಸಿ ಕಾಲೊನಿಯ ಶ್ರೀರಾಮ್ ಎಂಬಾತನ ಜೊತೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ.
ಯೋಜನೆಯಂತೆ ಮಲ್ಲೇಶ್ ಮತ್ತು ಶ್ರೀರಾಮ್ ಮೇ 22ರಂದು ಕುಮಾರ್‌ಗೆ ಮದ್ಯ ಕುಡಿಸಿ ತಲೆಗೆ ಸುತ್ತಿಗೆಯಿಂದ ಹೊಡೆದು, ರಸ್ತೆ ಅಪಘಾತವೆಂದು ಬಿಂಬಿಸಲು ಕುಮಾರ್ ಮತ್ತು ಆತನ ದ್ವಿಚಕ್ರ ವಾಹನವನ್ನು ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದರು.
ಕುಮಾರ್ ಅವರ ತಾಯಿ ಲಕ್ಷ್ಮಿ ತಮ್ಮ ಮಗನ ಸಾವಿನಲ್ಲಿ ರಾಮ್ ಮಲ್ಲೇಶ್ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ವೇಳೆ ಪತ್ನಿಯ ನಡವಳಿಕೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ತೀವ್ರ ಪರಿಶೀಲನೆ ನಡೆಸಿದ್ದಾರೆ.
ಎಸಿಪಿ ಪ್ರಕಾಶ್ ಮತ್ತು ಮಂಚೇರಿಯಲ್ ಗ್ರಾಮೀಣ ಸಿಐ ರವೀಂದರ್ ತಂಡದ ತನಿಖೆಯಲ್ಲಿ, ಇದು ರಸ್ತೆ ಅಪಘಾತವಲ್ಲ, ಕೊಲೆ ಎಂಬುದನ್ನು ಕಂಡುಕೊಂಡಿದ್ದಾರೆ. ಆರೋಪಿಗಳಿಂದ ಪ್ರೀಮಿಯಂ ಮತ್ತು 25 ಸಾವಿರ ರೂ. ನಗದು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಭಾರತಿ, ಸುರೇಂದರ್ ಮತ್ತು ಶ್ರೀರಾಮ್ ಎಂಬವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ರಾಮ್ ಮಲ್ಲೇಶ್ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ ಎಂದು ಅವರು ಹೇಳಿದರು.



