ಶತಕ ವಂಚಿತ ಸಮೀರ್ ರಿಜ್ವಿ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2026 ಪಂದ್ಯದಲ್ಲಿ 6 ವಿಕೆಟ್ ಗಳಿಂದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.
ದೆಹಲಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವನ್ನು 20 ಓವರ್ ಗಳಲ್ಲಿ 6 ವಿಕೆಟ್ ಗೆ 164 ರನ್ ಗೆ ನಿಯಂತ್ರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಸಾಧಾರಣ ಗುರಿ ಬೆಂಬತ್ತಿದ ಡೆಲ್ಲಿ ತಂಡ 7 ರನ್ ಕಲೆಹಾಕುವಷ್ಟರಲ್ಲಿ ಕೆಎಲ್ ರಾಹುಲ್ ಮತ್ತು ನಿತಿಶ್ ರಾಣಾ ವಿಕೆಟ್ ಕಳೆದುಕೊಂಡು ಕಂಗೆಟ್ಟಿತು. ಆದರೆ ಶ್ರೀಲಂಕಾದ ಪಾತುಮ್ ನಿಶಾಂಕಾ ಮತ್ತು ಸಮೀರ್ ರಿಜ್ವಿ ಮೂರನೇ ವಿಕೆಟ್ ಗೆ 66 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ನಿಶಾಂಕಾ (44) ರನ್ ಗಳಿಸಿ ಔಟಾದ ನಂತರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಸಮೀರ್ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 90 ರನ್ ಗಳಿಸಿದ್ದಾಗ ತಂಡದ ಗೆಲುವಿನ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಬಲಿಷ್ಠ ಬ್ಯಾಟಿಂಗ್ ಬೆನ್ನೆಲುಬನ್ನು ಡೆಲ್ಲಿ ಬೌಲರ್ ಗಳು ಸಂಘಟಿತ ದಾಳಿ ನಡೆಸಿ ಕಟ್ಟಿ ಹಾಕಿದರು. ತಂಡದ ಪರ ನಾಯಕ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ ಅರ್ಧಶತಕ (51) ಬಾರಿಸಿ ಹೋರಾಟ ನಡೆಸಿದರು.
ರೋಹಿತ್ ಶರ್ಮ (35), ನಮನ್ ದಿರ್ (28), ಮಿಚೆಲ್ ಸ್ನಾಂಟ್ನರ್ (18) ಮಾತ್ರ ಸ್ವಲ್ಪಮಟ್ಟಿಗೆ ಹೋರಾಟ ನಡೆಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.



