ಆಟೋ ಓಡಿಸುವಾಗ ಹೃದಯಾಘಾತಕ್ಕೆ ಒಳಗಾದ ಆಟೋ ಚಾಲಕ ಮೃತಪಟ್ಟ ಘಟನೆ ಹಾಸನದಲ್ಲಿ ಶನಿವಾರ ಸಂಭವಿಸಿದೆ. ಇದರಿಂದ ಜಿಲ್ಲೆಯಲ್ಲಿ ಕಳೆದ 39 ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಸಿದ್ದೇಶ್ವರ್ ನಗರದ ನಿವಾಸಿ ಗೋವಿಂದ (37) ಮೃತ ವ್ಯಕ್ತಿ. ಆಟೋ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರೇ ಆಟೋ ಚಲಾಯಿಸಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಹೃದಯಾಘಾತದಿಂದ ಯುವ ಸಮುದಾಯದ ಸರಣಿ ಸಾವು ಸಂಭವಿಸುತ್ತಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಸಾಯುತ್ತಿರುವುದು ಕುಟುಂಬದವರನ್ನು ಮಾತ್ರವಲ್ಲ ಸರ್ಕಾರವನ್ನೂ ಚಿಂತೆಗೀಡು ಮಾಡಿದೆ.
ಮೇ 20 ರಂದು ಅರಕಲಗೂಡು ತಾಲೂಕಿನ ಅಭಿಷೇಕ್ ಬೆಂಗಳೂರಿನಲ್ಲಿ ಉಸಿರು ನಿಲ್ಲಿಸಿದ್ರೆ, ಅದೇ ದಿನ ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂದ್ಯಾ ಬಲಿ ಆಗಿದ್ದರು. ಮೇ 28 ರಂದು ಕವನ ಉಸಿರು ನಿಲ್ಲಿಸಿದ್ದರು.



