ರಾಯಚೂರು: ಊಟ ಸೇವಿಸಿದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.
ಸಿರವಾರ ತಾಲೂಕಿನ ಕೆ.ತಿಮ್ಮಾಪುರದ ಗ್ರಾಮದ ನಿವಾಸಿಗಳಾದ ತಂದೆ ರಮೇಶ್ (35), ಪುತ್ರಿ ನಾಗಮ್ಮ (8) ಮತ್ತು ದೀಪಾ (6) ಮೃತಪಟ್ಟಿದ್ದಾರೆ.
ಮನೆಯಲ್ಲಿ ಊಟ ಮಾಡಿದ ನಂತರ 6 ಮಂದಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ದೀಪಾ ಮೃತಪಟ್ಟರೆ ರಮೇಶ್ ಮತ್ತು ನಾಗಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತಿಬ್ಬರು ಮಕ್ಕಳಾದ ಕೃಷ್ಣ, ಚೈತ್ರಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಕುಟುಂಬದವರೆಲ್ಲ ಸೋಮವಾರ ರಾತ್ರಿ ಚವಳಿಕಾಯಿ ಪಲ್ಯ, ರೊಟ್ಟಿ, ಅನ್ನ, ಸಾಂಬಾರ್ ಊಟ ಮಾಡಿದ್ದರು. ಊಟ ಮಾಡಿ ಮಲಗಿದ್ದ 6 ಜನರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.
ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ 6 ಮಂದಿಯನ್ನು ಮುಂಜಾನೆ 4 ಗಂಟೆ ಸುಮಾರಿಗೆ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತಂದೆ ರಮೇಶ್, ಪುತ್ರಿ ನಾಗಮ್ಮ ಸಾವಿಗೀಡಾಗಿದ್ದಾರೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.



