ಬೆಂಗಳೂರು:ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣಗಳು ಆತಂಕಕಾರಿಯಾಗಿ ಮುಂದುವರಿದಿದ್ದು, ಕಳೆದ ಐದು ವರ್ಷಗಳಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ 629 ಮಂದಿ ಮೃತಪಟ್ಟಿದ್ದಾರೆ.
ಆದರೆ, ಈ ಪೈಕಿ ಕೇವಲ ಏಳು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದ್ದು, 70 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತ ಕುಟುಂಬಗಳ ಪರಿಸ್ಥಿತಿಯನ್ನು ಈ ಅಂಕಿಅಂಶಗಳು ಎತ್ತಿ ತೋರಿಸಿವೆ.
ಗೃಹ ಇಲಾಖೆಯ ಅಂಕಿಅಂಶಗಳ ಪ್ರಕಾರ, 2022ರ ಜನವರಿಯಿಂದ 2026ರ ಜುಲೈವರೆಗೆ ರಾಜ್ಯದಲ್ಲಿ ಒಟ್ಟು 629 ವರದಕ್ಷಿಣೆ ಸಾವು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಪೊಲೀಸರು 543 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆದರೆ, 463 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ.
ಶಿಕ್ಷೆ ಮತ್ತು ಖುಲಾಸೆ ಸೇರಿದಂತೆ ಒಟ್ಟು 77 ಪ್ರಕರಣಗಳು ಇತ್ಯರ್ಥಗೊಂಡಿವೆ. ಇವುಗಳೆಲ್ಲವೂ 2022ರಿಂದ 2024ರ ನಡುವೆ ದಾಖಲಾಗಿದ್ದ ಪ್ರಕರಣಗಳಾಗಿವೆ. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. 2024ರಲ್ಲಿ ಒಂಬತ್ತು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದು, ಆ ಬಳಿಕ ಯಾವುದೇ ಪ್ರಕರಣದಲ್ಲಿ ಖುಲಾಸೆ ತೀರ್ಪು ಪ್ರಕಟವಾಗಿಲ್ಲ ಎಂದು ಅಂಕಿಅಂಶಗಳು ತಿಳಿಸಿವೆ.
13,453 ವರದಕ್ಷಿಣೆ ಕಿರುಕುಳ:
ವರದಕ್ಷಿಣೆ ಕಿರುಕುಳದಿಂದ ಸಂಭವಿಸುವ ಸಾವು ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರುವುದು ಸಂತ್ರಸ್ತರಿಗೆ ನ್ಯಾಯ ದೊರೆಯುವ ಪ್ರಕ್ರಿಯೆಯ ಬಗ್ಗೆ ಆತಂಕ ಮೂಡಿಸಿದೆ. ಅಲ್ಲದೆ, ಸಂತ್ರಸ್ತರ ಕುಟುಂಬಗಳು ದೀರ್ಘಕಾಲದ ಕಾನೂನು ಹೋರಾಟ ಎದುರಿಸುವಂತಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಕಷ್ಟಕರವಾಗಿದೆ. ಬಹುತೇಕ ಘಟನೆಗಳು ಮನೆಯೊಳಗೆ ನಡೆಯುವುದರಿಂದ ಸ್ವತಂತ್ರ ಸಾಕ್ಷಿಗಳು ದೊರೆಯುವುದು ಅಪರೂಪ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಸರಾಸರಿ 126 ಮಂದಿ ಸಾವು:
ಇದೇ ಅವಧಿಯಲ್ಲಿ ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಒಟ್ಟು 13,453 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 10,649 ಪ್ರಕರಣಗಳಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಒಟ್ಟು 8,307 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ. ಕೇವಲ 50 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದ್ದು, 1,914 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ವಾರ್ಷಿಕ ಸರಾಸರಿ 126 ಮಂದಿ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ವಾರ್ಷಿಕ ಸರಾಸರಿ 2,700 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, ವರದಕ್ಷಿಣೆ ನಿಷೇಧ ಕಾಯ್ದೆಯಡಿ ಸುಮಾರು 2,000 ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಆದರೆ, ಅಧಿಕೃತ ಅಂಕಿಅಂಶಗಳು ಸಮಸ್ಯೆಯ ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ. ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣಗಳು ಇನ್ನೂ ಆತಂಕಕಾರಿ ಮಟ್ಟದಲ್ಲಿದ್ದು, ನ್ಯಾಯ ಪಡೆಯುವ ಪ್ರಕ್ರಿಯೆ ದೀರ್ಘ ಹಾಗೂ ಕಷ್ಟಕರವಾಗಿರುವುದರಿಂದ ಅನೇಕರು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ದೈಹಿಕ,ಮಾನಸಿಕ ಹಿಂಸೆ:
ವರದಕ್ಷಿಣೆ ಕಿರುಕುಳದಿಂದ ಬಳಲುತ್ತಿರುವ ಅನೇಕ ಮಹಿಳೆಯರು ನ್ಯಾಯ ಪಡೆಯುವ ಪ್ರಕ್ರಿಯೆಯಲ್ಲಿನ ಸವಾಲುಗಳಿಂದಾಗಿ ತಮ್ಮ ನೋವನ್ನು ಹೊರಹಾಕಲು ಸಾಧ್ಯವಾಗದೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಹಿಂಸೆಯನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆ ಎಂದು ಅವೇಕ್ಷಾ ಮಹಿಳಾ ಟ್ರಸ್ಟ್‌ನ ಸಂಸ್ಥಾಪಕಿ ಡೊನ್ನಾ ಫರ್ನಾಂಡಿಸ್ ಅಭಿಪ್ರಾಯಪಟ್ಟಿದ್ದಾರೆ.
ವರದಕ್ಷಿಣೆ ಕಿರುಕುಳದ ವಿರುದ್ಧ ಪರಿಣಾಮಕಾರಿ ಕ್ರಮಗಳು, ತ್ವರಿತ ನ್ಯಾಯ ಮತ್ತು ಸಂತ್ರಸ್ತರಿಗೆ ಸೂಕ್ತ ರಕ್ಷಣೆ ದೊರೆಯಬೇಕಿದೆ ಎಂಬ ಒತ್ತಾಯ ಮತ್ತೆ ಕೇಳಿಬಂದಿದೆ.



