ನವದೆಹಲಿ: ರಷ್ಯಾದಿಂದ ತೈಲ ಹೊತ್ತು ಸಾಗುತ್ತಿದ್ದ ಚೀನಾದ 7 ಹಡಗುಗಳು ಮಾರ್ಗ ಬದಲಿಸಿ ಭಾರತದ ಕಡೆ ಆಗಮಿಸುತ್ತಿವೆ. ಇದರಿಂದ ಭಾರತದ ತೈಲ ಬಿಕ್ಕಟ್ಟಿಗೆ ತಾತ್ಕಾಲಿಕ ಪರಿಹಾರ ಸಿಗಲಿದೆ.
ಇರಾನ್ ನಲ್ಲಿ ಭೀಕರ ಯುದ್ಧ ನಡೆಯುತ್ತಿರುವ ಕಾರಣ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಭಾರತಕ್ಕೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿ ಪ್ರಮಾಣ ಹೆಚ್ಚಿಸಿದೆ. ಇದರಿಂದ ಚೀನಾಗೆ ಸಾಗಬೇಕಾಗಿದ್ದ ಹಡಗು ಭಾರತದ ಕಡೆ ಬರುತ್ತಿವೆ ಎಂದು ಹೇಳಲಾಗಿದೆ.
. ಸಮುದ್ರದಲ್ಲಿ ಸಿಲುಕಿರುವ “ಅನುಮೋದಿತ” ರಷ್ಯಾದ ತೈಲವನ್ನು ಖರೀದಿಸಲು ಭಾರತವು ಅಮೆರಿಕದಿಂದ ತಾತ್ಕಾಲಿಕ ವಿನಾಯಿತಿ ಪಡೆದ ನಂತರ, ಹಡಗು ಟ್ರ್ಯಾಕಿಂಗ್ ಸಂಸ್ಥೆ ವೋರ್ಟೆಕ್ಸಾ ಲಿಮಿಟೆಡ್ ಮೇಲ್ವಿಚಾರಣೆಯಲ್ಲಿ ಈ ಹಡಗುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಚೀನಾದ 7 ಹಡಗುಗಳ ಪೈಕಿ ಮಧ್ಯಮ ಗಾತ್ರದ ಕಚ್ಚಾ ತೈಲ ಹಡಗು ಅಕ್ವಾ ಟೈಟಾನ್ ಮಾರ್ಚ್ 21ರಂದು ಕರ್ನಾಟಕದ ಕಡಲ ತೀರವಾದ ಮಂಗಳೂರಿಗೆ ಬಂದು ಸೇರಲಿದೆ ಎಂದು ಹೇಳಲಾಗಿದೆ.
ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಬಂದರಿನಲ್ಲಿ ತೈಲ ತುಂಬಿಸಿದ ಟ್ಯಾಂಕರ್ ಮೂಲತಃ ಚೀನಾದ ರಿಜಾವೊ ಬಂದರಿಗೆ ತೆರಳುತ್ತಿತ್ತು. ಭಾರತವು ಅಮೆರಿಕದ ವಿನಾಯಿತಿ ಪಡೆದು ಖರೀದಿಗೆ ಮುಂದಾಗಿ ತುರ್ತು ಬೇಡಿಕೆ ಹಿನ್ನೆಲೆಯಲ್ಲಿ ಈ ಹಡಗುಗಳ ಮಾರ್ಗ ಬದಲಿಸಿ ಭಾರತಕ್ಕೆ ಕಳುಹಿಸಿಕೊಡಲಾಗಿದೆ.
ಸೂಯೆಜ್ ಮ್ಯಾಕ್ಸ್ ಝೌಜೌ ಎನ್ ಹೆಸರಿನ ಮತ್ತೊಂದು ಹಡಗು ಗುಜರಾತ್‌ನ ಜಾಮ್‌ನಗರದ ಸಿಕ್ಕಾ ಬಂದರಿಗೆ ಮಾರ್ಚ್ 25ರಂದು ಆಗಮಿಸುವ ನಿರೀಕ್ಷೆಯಿದೆ.
ಮಾರ್ಚ್ ಆರಂಭದಲ್ಲಿ ಚೀನಾದ ಹಡಗುಗಳು ತನ್ನ ಮಾರ್ಗ ಬದಲಿಸಿ ಭಾರತದ ಕಡೆ ಪ್ರಯಾಣ ಆರಂಭಿಸಿದ್ದವು ಎಂದು ಹೇಳಲಾಗಿದೆ.
ಯುದ್ಧದ ಕಾರಣ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ 30 ದಿನಗಳ ವಿನಾಯಿತಿ ನೀಡಿತ್ತು. ಇದೀಗ ಹರ್ಮುಜ್ ಜಲಸಂಧಿಯಲ್ಲಿ ಭಾರತದ 20ಕ್ಕೂ ಅಧಿಕ ಹಡಗು ಸೇರಿದಂಗತೆ 70 ಹಡಗುಗಳು ಸಿಲುಕಿವೆ. ಇದರಿಂದ ಒಟ್ಟಾರೆ 20 ಹಡಗುಗಳನ್ನು ಇರಾನ್ ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ.
ಭಾರತ ಕೇವಲ ಒಂದು ವಾರದಲ್ಲಿ ಸುಮಾರು 30 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ. ಜನವರಿಯಲ್ಲಿ, ಭಾರತವು ಯುಎಸ್ ಜೊತೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದ್ದರಿಂದ ರಷ್ಯಾದಿಂದ ಒಟ್ಟಾರೆ ತೈಲ ಆಮದು 21% ಕ್ಕೆ ಇಳಿದಿದೆ.
ಭಾರತ ತನ್ನ ಖರೀದಿಗಳನ್ನು ಕಡಿಮೆ ಮಾಡುತ್ತಿದ್ದಂತೆ, ಚೀನಾ ರಷ್ಯಾದ ತೈಲದ ಮೇಲಿನ ಆಳವಾದ ರಿಯಾಯಿತಿಗಳನ್ನು ಬಂಡವಾಳ ಮಾಡಿಕೊಂಡಿತು ಮತ್ತು ಅದರ ಖರೀದಿಗಳನ್ನು ಹೆಚ್ಚಿಸಿತು. ಆದಾಗ್ಯೂ, ಯುಎಸ್ ಈಗ ಹೆಚ್ಚಿನ ದೇಶಗಳಿಗೆ ರಷ್ಯಾದ ತೈಲವನ್ನು ಖರೀದಿಸಲು ಅವಕಾಶ ನೀಡುವುದರೊಂದಿಗೆ, ಸ್ಪರ್ಧೆ ತೀವ್ರಗೊಳ್ಳುತ್ತಿದೆ.
ನಿಟ್ಟುಸಿರು ಬಿಟ್ಟ ಭಾರತ
ರಷ್ಯಾದ ಕಚ್ಚಾ ತೈಲದ ಆಗಮನದಿಂದ ಭಾರತ ನಿಟ್ಟುಸಿರುಬಿಡುವಂತಾಗಿದೆ. ಏಕೆಂದರೆ ಭಾರತ ಶೇ.90ರಷ್ಟು ತೈಲ ಆಮದು ಮಾಡಿಕೊಳ್ಳುತ್ತಿದೆ.
ಹಾರ್ಮುಜ್ ಜಲಸಂಧಿ ಮಾರ್ಗದಿಂದ ಶೇ.40ರಿಂದ 50ರಷ್ಟು ತೈಲ ಭಾರತಕ್ಕೆ ಬರಲಿದ್ದು, ಇದರಲ್ಲಿ ಇರಾನ್ ನಿಂದಲೇ ಶೇ.20ರಷ್ಟು ತೈಲ ಆಮದು ಮಾಡಿಕೊಳ್ಳುತ್ತದೆ. ಉಳಿದ ತೈಲ ಗಲ್ಫ್ ರಾಷ್ಟ್ರಗಳಿಂದ ಬರುತ್ತದೆ.



