ನವದೆಹಲಿ: ರಾಜ್ಯಸಭಾ ಉಪನಾಯಕನ ಸ್ಥಾನದಿಂದ ವಜಾಗೊಳಿಸಿದ್ದರಿಂದ ಅಸಮಾಧಾನಗೊಂಡಿದ್ದ ರಾಘವ್ ಚಡ್ಡಾ ಸೇರಿದಂತೆ ಆಮ್ ಆದ್ಮಿ ಪಕ್ಷದ 7 ಸಂಸದರು ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಮತ್ತೊಂದು ಊಹಾತ್ಮಕ ಘಟನೆ ನಡೆದಿದೆ.
ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ರಾಘವ್ ಚಡ್ಡಾ ಸೇರಿದಂತೆ ೭ ಸಂಸದರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯನ್ನು ಘೋಷಿಸಿದರು. ರಾಘವ್ ಚಡ್ಡಾ ನಿರ್ಧಾರ ಪಕ್ಷಕ್ಕೆ ಎಸಗಿದ ದ್ರೋಹ. ಸೂಕ್ತ ಸಮಯದಲ್ಲಿ ಜನರು ಬುದ್ದಿ ಕಲಿಸುತ್ತಾರೆ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಶುಕ್ರವಾರ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3ನೇ ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಬಿಜೆಪಿಯೊಂದಿಗೆ ನಮ್ಮನ್ನು ವಿಲೀನಗೊಳಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
ರಾಘವ್ ಚಡ್ಡಾ, ಅಶೋಕ್ ಕುಮಾರ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರು 2022ರಿಂದ ಆಮ್ ಆದ್ಮಿ ಪಕ್ಷದಿಂದ (ಎಎಪಿ) ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಘವ್ ಚಡ್ಡಾ, “ನಾನು ನನ್ನ ರಕ್ತ ಮತ್ತು ಬೆವರಿನಿಂದ ಆಮ್ ಆದ್ಮಿ ಪಕ್ಷವನ್ನು ಪೋಷಿಸಿ ನನ್ನ ಯೌವನದ 15 ವರ್ಷಗಳನ್ನು ಆ ಪಕ್ಷಕ್ಕಾಗಿ ನೀಡಿದ್ದೆ. ಆದರೆ, ಆ ಆಮ್ ಆದ್ಮಿ ಪಕ್ಷವು ಈಗ ಅದರ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಗಳಿಂದ ಸಂಪೂರ್ಣವಾಗಿ ವಿಮುಖವಾಗಿದೆ ಎಂದು ಆರೋಪಿಸಿದರು.
ಪಕ್ಷವು ಈಗ ದೇಶಕ್ಕಾಗಿ ಅಥವಾ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ. ಕೇವಲ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ನಿಮ್ಮಲ್ಲಿ ಹಲವರು ಕಳೆದ ಕೆಲವು ವರ್ಷಗಳಿಂದ ಇದನ್ನು ನನಗೆ ಹೇಳುತ್ತಲೇ ಇದ್ದೀರಿ. ನಾನು ತಪ್ಪಾದ ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ ಎಂದು ನಿಮ್ಮಂತೆ ನಾನು ಕೂಡ ಭಾವಿಸಿದ್ದೇನೆ. ಆದ್ದರಿಂದ, ಇಂದು ನಾನು ಆಮ್ ಆದ್ಮಿ ಪಕ್ಷದಿಂದ ದೂರವಿದ್ದು ಜನರ ಬಳಿಗೆ ಹೋಗುತ್ತಿದ್ದೇನೆ ಎಂದು ಘೋಷಿಸುತ್ತೇನೆ” ಎಂದರು.
ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರಾದ ನಾವು ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ವಿಲೀನಗೊಳ್ಳುತ್ತೇವೆ.” ಎಂದು ರಾಘವ್ ಚಡ್ಡಾ ಹೇಳಿದರು
ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್‌ಜಿತ್ ಸಿಂಗ್ ಸಾಹ್ನಿ ಕೂಡ ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ ಎಂದು ರಾಘವ್ ಚಡ್ಡಾ ತಿಳಿಸಿದರು.
ರಾಜ್ಯಸಭೆಯಲ್ಲಿ 10 ಎಎಪಿ ಸಂಸದರಿದ್ದಾರೆ, ಅವರಲ್ಲಿ 2/3ಕ್ಕಿಂತ ಹೆಚ್ಚು ಜನರು ನಮ್ಮೊಂದಿಗಿದ್ದಾರೆ. ಅವರು ಸಹಿ ಮಾಡಿದ್ದಾರೆ. ಬೆಳಿಗ್ಗೆ ನಾವು ಸಹಿ ಮಾಡಿದ ಪತ್ರ ಮತ್ತು ದಾಖಲೆಗಳನ್ನು ರಾಜ್ಯಸಭಾ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಅವರಲ್ಲಿ ಮೂವರು ನಿಮ್ಮ ಮುಂದೆ ಇದ್ದಾರೆ. ನಮ್ಮ ಜೊತೆಗೆ, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಇದ್ದಾರೆ.” ಎಂದು ರಾಘವ್ ಚಡ್ಡಾ ಘೋಷಿಸಿದ್ದಾರೆ.



