ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮಡಿವಾಳದ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು ಮಾಡಲಾಗಿದೆ.
ಸಿಬ್ಬಂದಿಯಾದ ಸುಧಾಕರ್, ಗಿರಿಜಮ್ಮ, ಆರ್.ಸರಿತಾ ಸಸ್ಪೆಂಡ್ ಆಗಿದ್ದಾರೆ. ಜನಿವಾರ ತೆಗೆಸಿದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಪತ್ರ ಬರೆಯಲಾಗಿತ್ತು. ವಸ್ತ್ರಸಂಹಿತೆ ಅಧಿಕಾರಿಗಳ ನೇಮಕ ಮಾಡಿದರೂ ಈ ಘಟನೆ ನಡೆದಿದೆ.
ವಿದ್ಯಾರ್ಥಿಗಳ ಜನಿವಾರ ತೆಗೆಸದಂತೆ ಸೂಚನೆ ನೀಡಲಾಗಿತ್ತು. ಆದ್ರೂ ಜನಿವಾರ ತೆಗೆಸಿದ್ದು ಉದ್ದೇಶಪೂರ್ವಕ ಘಟನೆಯಂತೆ ಕಂಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿದ ವಿವರ ನೀಡುವಂತೆ ಪತ್ರ ಮುಖೇನೆ ಕೆಇಎ ಆಗ್ರಹಿಸಿತ್ತು.
2026ನೇ ಸಾಲಿನ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರು ಕೇಂದ್ರದಲ್ಲಿ ಏಪ್ರಿಲ್ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿಗಳು ಸೂಚಿಸಿರುತ್ತಾರೆಂದು, ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ.
ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ. ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ.
ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಬರೆದ ಪತ್ರದಲ್ಲಿ ಕೆಇಎ ಆಗ್ರಹಿಸಿತ್ತು.



