ನವದೆಹಲಿ: ಮಂಗಳವಾರ ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ಶೃಂಗಸಭೆಯಲ್ಲಿ ಯುರೋಪ್ ವಾಹನಗಳ ಮೇಲೆ ಸುಂಕ ಕಡಿತ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದು, ಈ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡುವ ಸಾಧ್ಯತೆ ಇದೆ.
ಮಂಗಳವಾರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಯುರೋಪ್ ವಾಹನಗಳ ಮೇಲಿನ ಸುಂಕವನ್ನು ಶೆ.70ರಷ್ಟು ಕಡಿತಗೊಳಿಸಲಿರುವ ಭಾರತ ಶೇ.110ರಿಂದ ಶೇ. 40ಕ್ಕೆ ಕಡಿತ ಘೋಷಿಸುವ ಸಾಧ್ಯತೆ ಇದೆ.
ಭಾರತಕ್ಕೆ ಭೇಟಿ ನೀಡಿರುವ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೋ ಕೋಸ್ಟಾ ಸೇರಿದಂತೆ ಹಿರಿಯ EU ನಾಯಕರು ದೆಹಲಿಯಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವದ ಪರೇಡ್ ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಈ ವೇಳೆ ಯುರೋಪಿಯನ್ ಒಕ್ಕೂಟಗಳ ಮುಖಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಔಪಚಾರಿಕ ಮಾತುಕತೆ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಪರೋಕ್ಷವಾಗಿ ಅಮೆರಿಕಕ್ಕೆ ತಿರುಗೇಟು ನೀಡುವ ಸುಳಿವು ನೀಡಿದ್ದಾರೆ.
ಭಾರ ಮತ್ತು ಯುರೋಪಿಯನ್ ಒಕ್ಕೂಟಗಳ ನಡುವಣ ಮುಕ್ತ ವಾಣಿಜ್ಯ ಒಪ್ಪಂದದ (FTA) ಕುರಿತು ಅಂತಿಮ ರೂಪ ನೀಡಲಾಗುತ್ತಿದ್ದರೂ ಇನ್ನೂ ಕೆಲವು ತಾಂತ್ರಿಕ ವಿಷಯಗಳು ಬಾಕಿ ಉಳಿದಿದ್ದು ಅವುಗಳನ್ನು ಸರಿ ಹೊಂದಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಂಗಳವಾರ ಶೃಂಗಸಭೆಯಲ್ಲಿ ಅಧಿಕೃತ ಘೋಷಣೆಗಳು ಹೊರಬೀಳಲಿವೆ.
ಕಳೆದ ವಾರ ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಘೋಷಿಸಿದ್ದರು. ಇದು ಎರಡೂ ಆರ್ಥಿಕತೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಮಹತ್ವದ ವಾಣಿಜ್ಯ ಒಪ್ಪಂದಗಳಲ್ಲಿ ಒಂದಾಗಬಹುದು ಎಂದು ಅವರು ವಿಶ್ಲೇಷಣೆ ಕೂಡಾ ಮಾಡಿದ್ದರು.
ಭಾರತದಿಂದ ಇಯುಗೆ ಆಗುವ ರಫ್ತು ಪ್ರಮಾಣ ಎಷ್ಟು?
ರಫ್ತು ಭಾಗದಲ್ಲಿ ಭಾರತವು EUಗೆ 75.9 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರವಾನಿಸಿದೆ. ಇದರಲ್ಲಿ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್, ಬಟ್ಟೆಗಳು ಮತ್ತು ಇತರ ಕಾರ್ಮಿಕ-ಆಧಾರಿತ ಉತ್ಪನ್ನಗಳು ಪ್ರಮುಖವಾಗಿವೆ. ಸ್ಮಾರ್ಟ್‌ಫೋನ್‌ಗಳು, ಟೆಕ್ಸ್‌ಟೈಲ್‌ಗಳು, ರಾಸಾಯನಿಕಗಳು, ಉಕ್ಕು, ಔಷಧಗಳು ಮತ್ತು ಆಟೋ ಘಟಕಗಳು ಇದರ ಮೂಲವಾಗಿವೆ. ಇದು ಭಾರತದ ಸಂಸ್ಕರಣೆ, ಅಸೆಂಬ್ಲಿ ಮತ್ತು ಸ್ಕೇಲ್ ಉತ್ಪಾದನೆಯ ಶಕ್ತಿಯನ್ನು ತೋರಿಸುತ್ತದೆ.
ಈ ವಾಣಿಜ್ಯ ಹರಿವುಗಳು ಪೂರಕ ಸಂಬಂಧವನ್ನು ತೋರಿಸುತ್ತವೆ. ಯುರೋಪಿಯನ್ ತಂತ್ರಜ್ಞಾನ ಮತ್ತು ಇನ್‌ಪುಟ್‌ಗಳು ಭಾರತದ ಉದ್ಯಮಕ್ಕೆ ಬೆಂಬಲ ನೀಡುತ್ತವೆ. ಭಾರತದ ರಫ್ತುಗಳು ಯುರೋಪ್ ದೀರ್ಘಕಾಲದಿಂದ ಬಿಟ್ಟಿರುವ ಕ್ಷೇತ್ರಗಳ ಬೇಡಿಕೆಯನ್ನು ಪೂರೈಸುತ್ತವೆ ಎಂದು ವರದಿ ಹೇಳುತ್ತದೆ.
ಒಪ್ಪಂದದಿಂದ ಆಗುವ ಪ್ರಯೋಜನಗಳೇನು?:
GTRI ಸ್ಥಾಪಕ ಅಜಯ್ ಶ್ರೀವಾಸ್ತವ್ ಅವರ ಹೇಳುವ ಪ್ರಕಾರ, ಭಾರತ-EU ನಡುವಣ ವ್ಯಾಪಾರವನ್ನ ಪಾಲುಗಾರಿಕೆಯ ಸ್ಪರ್ಧೆಯಾಗಿ ಅಲ್ಲ, ಉತ್ಪಾದನಾ ಸಾಖ್ಯತೆಯಾಗಿ ಅರ್ಥೈಸಬೇಕು. ಯುರೋಪಿಯನ್ ಯಂತ್ರೋಪಕರಣಗಳು, ಘಟಕಗಳು ಮತ್ತು ನಿಖರ ಇನ್‌ಪುಟ್‌ಗಳು ಭಾರತದ ಕಾರ್ಖಾನೆಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಭಾರತದ ಸ್ಕೇಲ್ ಉತ್ಪಾದನೆಯು ಯುರೋಪ್‌ಗೆ ಕೈಗೆಟುಕುವ, ಗ್ರಾಹಕ-ಸಿದ್ಧ ಉತ್ಪನ್ನಗಳನ್ನು ಒದಗಿಸುತ್ತದೆ. ಎರಡೂ ಆರ್ಥಿಕತೆಗಳು ವಿಭಿನ್ನ ಭಾಗಗಳಲ್ಲಿ ವಿಶೇಷತೆ ಹೊಂದಿರುವುದರಿಂದ, ಸುಂಕ ರದ್ದತಿ ವೆಚ್ಚ ಕಡಿತದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದ್ದಾರೆ.



