ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಸೇರಿದಂತೆ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ 2 ಎಫ್ ಐಆರ್ ದಾಖಲಾಗಿದೆ. ಎಫ್ ಐಆರ್ ದಾಖಲಾಗುತ್ತಿದ್ದಂತೆ ಬಂಧನ ಭೀತಿ ಎದುರಿಸುತ್ತಿರುವ ಮುನಿರತ್ನ ತಲೆ ಮರೆಸಿಕೊಂಡಿದ್ದಾರೆ.
ಜೀವ ಬೆದರಿಕೆ ಪ್ರಕರಣದಲ್ಲಿ ದಾಖಲಾಗಿರುವ ಎಫ್ ಐಆರ್ ನಲ್ಲಿ ನಾಲ್ವರು ಆರೋಪಿಗಳನ್ನು ಹೆಸರಿಸಲಾಗಿದ್ದು, ಎ1 ಆರೋಪಿಯಾಗಿ ಶಾಸಕ ಮುನಿರತ್ನ, ಎ2 ಆಪ್ತ ಸಹಾಯಕ ವಿಜಯ್ ಕುಮರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಅವರ ಹೆಸರನ್ನು ದಾಖಲಿಸಲಾಗಿದೆ.
ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದರು. ಅಲ್ಲದೇ ತನಗೆ ರಕ್ಷಣ ನೀಡುವಂತೆ ಮನವಿ ಮಾಡಿದ್ದರು.
ಶಾಸಕ ಮುನಿರತ್ನ ಸೆಪ್ಟೆಂಬರ್ 9 ರಂದು 20 ಲಕ್ಷ ಹಣ ಕೇಳಿದ್ದರು. ಹಣ ನೀಡಿದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದರು. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪ್ರಕರಣ ಸಂಬಂಧ ಮುನಿರತ್ನ ಅವರಿಗೆ ವೈಯಾಲಿಕಾವಲ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಮುನಿರತ್ನ ಮನೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಇದೇ ವೇಳೆ ಪ್ರಕರಣ ದಾಖಲಾಗುತ್ತಿದ್ದಂತೆ ಮುನಿರತ್ನ ಗೌಪ್ಯ ಜಾಗದಲ್ಲಿ ತಲೆ ಮರೆಸಿಕೊಂಡಿದ್ದಾರೆ.