ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಬಾರಿ ಆಯ್ಕೆ ಬಯಸಿ ಸ್ಪರ್ಧಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಎರಡನೇ ಬಾರಿ ಪ್ರಯತ್ನ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದ್ದು, ಎಕೆ-47 ವಶಕ್ಕೆ ಪಡೆಯಲಾಗಿದೆ.
ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಅವರ ಗಾಲ್ಫ್ ಕ್ಲಬ್‌ನಲ್ಲಿ ಭಾನುವಾರ ಹತ್ಯೆ ದಾಳಿ ನಡೆದಿದೆ. ಆದರೆ ಈ ದಾಳಿಯಲ್ಲಿ ಟ್ರಂಪ್ ಸುರಕ್ಷಿತವಾಗಿದ್ದಾರೆ. 58 ವರ್ಷದ ರಿಯಾನ್ ವೆಸ್ಲೆ ರುಥ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಫ್ ಬಿಐ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ನಂತರ ನಡೆಯುತ್ತಿರುವ ಎರಡನೇ ದಾಳಿಯಾಗಿದೆ. ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ಗುಂಡು ಹಾರಾಟದ ಶಬ್ಧ ಕೇಳಿ ಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಎಫ್ ಬಿಐ ದಾಳಿಯನ್ನು ದೃಢಪಡಿಸಿದೆ. ಆದರೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಟ್ರಂಪ್ ಮೇಲೆ ನಡೆದ ಜಾಗದ ಸಮೀಪ ಎಕೆ 47 ಗನ್ ಪೊದೆಯೊಂದರಲ್ಲಿ ಸಿಕ್ಕಿದೆ. ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ದಾಳಿಯ ಹಿಂದಿನ ಕಾರಣ ಪತ್ತೆ ಹಚ್ಚಲು ವಿಚಾರಣೆ ನಡೆಸುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಗಾಲ್ಫ್ ಆಡುತ್ತಿದ್ದ ಸುಮಾರು 400 ಗಜಗಳಷ್ಟು ದೂರದಲ್ಲಿ ಪೊದೆ ಮೂಲಕ ಎಕೆ-47 ರೈಫಲ್ ಪತ್ತೆ ಆಗಿದ್ದು, ಗುಂಡು ಹಾರಿಸಿದ ನಂತರ ರೈಫಲ್ ನ್ನು ಕೆಳಗಿಳಿಸಿ ಎಸ್‌ಯುವಿಯಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಘಟನೆಯಲ್ಲಿ 2 ಬ್ಯಾಕ್‌ಪ್ಯಾಕ್‌ಗಳು, ಗುರಿಗಾಗಿ ಬಳಸಲಾದ ಸ್ಕೋಪ್ ಮತ್ತು ಗೋಪ್ರೊ ಕ್ಯಾಮೆರಾದೊಂದಿಗೆ ಬಂದೂಕನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.
ಟ್ರಂಪ್ ಮೇಲೆ ಗುಂಡಿನ ದಾಳಿ ಸುದ್ದಿ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರಾಜಕೀಯ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂಬತ್ತು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಕಿವಿಗೆ ತಗುಲಿ ಗುಂಡು ಹಾರಿದ್ದರಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದರು.