ಹೆತ್ತ ತಾಯಿಯನ್ನೇ ಮರಕ್ಕೆ ಕಟ್ಟಿ ಹಾಕಿದ ಮಕ್ಕಳು ಬೆಂಕಿ ಹಚ್ಚಿ ಜೀವಂತ ಸುಟ್ಟುಹಾಕಿದ ಆಘಾತಕಾರಿ ಘಟನೆ ತ್ರಿಪುರದಲ್ಲಿ ನಡೆದಿದೆ.
ಪಶ್ಚಿಮ ತ್ರಿಪುರದ ಕಮರ್ ಬಾರಿ ಜಿಲ್ಲೆಯ ಚಂಪಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಪೊಲೀಸರು ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.
62 ವರ್ಷದ ತಾಯಿ ಒಂದೂವರೆ ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದು, ಮಗನ ಮನೆಯಲ್ಲಿ ವಾಸವಾಗಿದ್ದರು. ಮತ್ತೊಬ್ಬ ಮಗ ಅಗರ್ತಾಲದಲ್ಲಿ ವಾಸವಿದ್ದ. ಮಕ್ಕಳು ಮತ್ತು ತಾಯಿಯ ನಡುವೆ ಭೂಮಿ ಹಂಚಿಕೆ ಸಂಬಂಧ ನಡೆದ ಕೌಟುಂಬಿಕ ಕಲಹದಿಂದ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ತಾಯಿಯನ್ನು ಮರಕ್ಕೆ ಕಟ್ಟಿಹಾಕಿ ಮಕ್ಕಳು ಬೆಂಕಿ ಹಚ್ಚಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಿ ತಾಯಿ ಮೃತಪಟ್ಟಿದ್ದು, ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.
ಇಬ್ಬರು ಮಕ್ಕಳನ್ನು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯುವ ಮೂಲಕ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.