ಬೇಕರಿಯಿಂದ ತಂದ ಕೇಕ್ ತಿಂದ 5 ವರ್ಷದ ಮಗು ಫುಡ್ ಪಾಯ್ಸನ್ ಆಗಿ ಮೃತಪಟ್ಟಿದ್ದು, ತಂದೆ-ತಾಯಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದ ನಿವಾಸಿ ಬಾಲರಾಜ್, ತಾಯಿ ನಾಗಲಕ್ಷ್ಮಿ ಪುತ್ರ ಧೀರಜ್ (5) ಮೃತಪಟ್ಟ ಬಾಲಕ.
ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲರಾಜ್ ಮಗನಿಗಾಗಿ ಕೇಕ್ ತೆಗೆದು ಕೊಂಡು ಹೋಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗುವಿನ ಜತೆ ಸೇರಿ ಮೂವರು ಕೇಕ್ ಸೇವಿಸಿದ್ದರು. ಕೇಕ್ ಸೇವಿಸಿದ ಬೆನ್ನಲ್ಲೇ ಮೂವರು ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಧೀರಜ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆ ಬಾಲರಾಜ್, ನಾಗಲಕ್ಷ್ಮಿ ದಂಪತಿ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇಕ್ ತಂದಿದ್ದು ಯಾವ ಬೇಕರಿಯಿಂದ? ಕೇಕ್ನಲ್ಲಿರೋ ಅಂಶಗಳಿಂದ ಅಸ್ವಸ್ಥರಾಗಿದ್ದಾರಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಪುಡ್ ಪಾಯಿಸನ್ ನಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಲಕ ಧೀರಜ್ ತಂದೆ ಬಾಲರಾಜ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ವ್ಯಕ್ತಿಯೊಬ್ಬರು ಆರ್ಡರ್ ಮಾಡಿದ ಕೇಕ್ ಅನ್ನು ನಂತರ ಕ್ಯಾನ್ಸಲ್ ಮಾಡಿದ್ದರಂತೆ. ಹೀಗಾಗಿ ಬಾಲರಾಜ್ ಕೇಕ್ ಮನೆಗೆ ತಂದು ಕುಟುಂಬದೊಂದಿಗೆ ತಿಂದಿದ್ದಾರೆ.