ಬಿಜೆಪಿ ಕಾರ್ಯಕರ್ತನನ್ನು ಆರ್ ಎಸ್ ಎಸ್ ಕಾರ್ಯಕರ್ತ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಫಾರ್ಮ್ ಹೌಸ್ ನಲ್ಲಿ ನಡೆದಿದ್ದು, ಮೂವರನ್ನು ಬಂಧಿಸಲಾಗಿದೆ.
ಅಕ್ಟೋಬರ್ 26ರಂದು ಈ ಘಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತ ಪುನೀತ್ ಮೃತಪಟ್ಟಿದ್ದು, ಆರ್ ಎಸ್ ಎಸ್ ಕಾರ್ಯಕರ್ತ ಎಂದು ಹೇಳಲಾದ ನಾಗೇಶ್, ಚಂದ್ರು ಮತ್ತು ಮುರುಳಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಆರ್ ಎಸ್ ಎಸ್ ಕಾರ್ಯಕರ್ತರು ವೀಕೆಂಡ್ ಕಳೆಯಲು ಯುವತಿಯರ ಜೊತೆ ಫಾರ್ಮ್ ಹೌಸ್ ಗೆ ಬಂದಿದ್ದು, ಈಜುಕೊಳದಲ್ಲಿ ಇದ್ದಾಗ ಫಾರ್ಮ್ ಹೌಸ್ ಗೆ ನುಗ್ಗಿದ ಸ್ಥಳೀಯರು ಯುವತಿಯ ಫೋಟೊ ತೆಗೆಯಲು ಯತ್ನಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡ ಬೆಂಗಳೂರಿನಿಂದ ಬಂದಿದ್ದ ಗುಂಪು ಮತ್ತು ಸ್ಥಳೀಯರ ನಡುವೆ ವಾಗ್ವಾದ ಉಂಟಾಗಿದ್ದು, ಈ ವೇಳೆ ಮೂವರು ಆರೋಪಿಗಳು ದೊಣ್ಣೆಯಿಂದ ಪುನೀತ್ ತಲೆಯ ಮೇಲೆ ಹಲ್ಲೆ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಪುನೀತ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.