ಮಠ ಚಿತ್ರದ ಖ್ಯಾತಿಯ ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದುಕೊಂಡು ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ 52 ವರ್ಷ ವಯಸ್ಸಾಗಿತ್ತು.
ನವೆಂಬರ್ 2ರಂದು ಗುರುಪ್ರಸಾದ್ ಹುಟ್ಟುಹಬ್ಬವಾಗಿದ್ದು, ಮಾರನೇ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲಗಾರರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಾವು ನಿರ್ದೇಶಿಸಿದ ಚಿತ್ರಗಳು ಸತತ ಸೋಲುಂಡಿದ್ದವು. ಅದರಲ್ಲೂ ಇತ್ತೀಚೆಗೆ ಭಾರೀ ನಿರೀಕ್ಷೆ ಹುಟ್ಟಿಸಿದ್ದ ರಂಗನಾಯಕ ಚಿತ್ರ ಹೀನಾಯ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಸಾಲದ ಸುಳಿಗೆ ಗುರುಪ್ರಸಾದ್ ಸಿಲುಕಿದ್ದರು ಎಂದು ಹೇಳಲಾಗಿದೆ.
ಮೊದಲ ಮದುವೆ ಮುರಿದುಬಿದ್ದಿದ್ದರಿಂದ ಇತ್ತೀಚೆಗೆ ಎರಡನೇ ಮದುವೆ ಆಗಿದ್ದ ಗುರುಪ್ರಸಾದ್ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಪದೇಪದೆ ಮನೆ ಬದಲಿಸುತ್ತಿದ್ದರು. ಇದೀಗ ಮಾದನಾಯಕಹಳ್ಳಿಯ ಅಪಾರ್ಟ್ ಮೆಂಟ್ ಗೆ ತೆರಳಿದ್ದು, ಶನಿವಾರ ಮನೆಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಾದನಾಯಕಹಳ್ಳಿ ಪೊಲೀಸರು ದೌಡಾಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.