ಮೀನು ಹಿಡಿಯಲು ತೆರಳಿದ್ದ ತಂದೆ ಹಾಗೂ ಇಬ್ಬರು ಘಟಪ್ರಭಾ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ಸಂಭವಿಸಿದೆ.
ಯಮಕನಮರಡಿ ಸಮೀಪದ ಬೆನಕನಹೊಳಿ ಬಳಿ ಭಾನುವಾರ ಸಂಜೆ ಘಟಪ್ರಭಾ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.
ಬೆನಕನಹೊಳಿಯ ಲಕ್ಷ್ಮಣ ರಾಮ ಅಂಬಲಿ (45), ಮಕ್ಕಳಾದ ರಮೇಶ (15) ಮತ್ತು ಯಲ್ಲಪ್ಪ(13) ಮೃತಪಟ್ಟಿದ್ದು, ಅವರ ಮೃತದೇಹಗಳಿಗೆ ಶೋಧ ಕಾರ್ಯ ನಡೆದಿದೆ.
ತಂದೆ ಲಕ್ಷ್ಮಣ ಹಾಗೂ ಅವರ ಮಕ್ಕಳು ಘಟಪ್ರಭಾ ನದಿ ಸೇತುವೆ ಮೇಲೆ ಭಾನುವಾರ ಸಂಜೆ ಬೈಕ್ ನಿಲ್ಲಿಸಿ, ಮೀನು ಹಿಡಿಯಲು ನದಿ ನೀರಿಗೆ ಇಳಿದಿದ್ದರು. ಆದರೆ, ಸೋಮವಾರ ಬೆಳಿಗ್ಗೆಯವರೆಗೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೂವರು ನೀರಿನಲ್ಲಿ ಮುಳುಗಿರುವ ಕುರಿತು ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಎನ್ ಡಿಆರ್ ಎಫ್ ತಂಡ ಹಾಗೂ ಯಮಕನಮರಡಿ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.