ಮುಂಬೈ: ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುವ ಆಶಯದೊಂದಿಗೆ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಐಐಟಿ-ಜಂಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಅವರಲ್ಲಿ ಬಹುಪಾಲು ಎಲ್ಲರೂ ಪ್ರತಿಷ್ಠಿತ ಕಂಪನಿಗಳಲ್ಲಿ ನೌಕರಿ ಗಿಟ್ಟಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಬಯಸುತ್ತಾರೆ.
ಪ್ರತಿ ವರ್ಷ, ರಾಷ್ಟ್ರದ ಕೆಲವು ಉನ್ನತ ಕಂಪನಿಗಳು, ಹೆಚ್ಚಾಗಿ ಸಲಹಾ / ಐಟಿ ಸಂಸ್ಥೆಗಳು, ವಿದ್ಯಾರ್ಥಿಗಳು ಪದವಿ ಪಡೆಯುವ ತಿಂಗಳ ಮೊದಲು ಈ ಕ್ಯಾಂಪಸ್‌ಗಳಿಗೆ ಭೇಟಿ ನೀಡಿ ಕುಶಾಗ್ರಮತಿಗಳನ್ನು ಆಯ್ಕೆ ಮಾಡುವುದು ವಾಡಿಕೆ.
ಆದರೆ ಕಳೆದ ಕೆಲವು ವರ್ಷಗಳಲ್ಲಿ ಚಿತ್ರಣ ಬದಲಾಗಿದೆ. ಐಐಟಿಗಳು ಸೇರಿದಂತೆ ಕೆಲವು ಉನ್ನತ ಕಾಲೇಜುಗಳ ಪ್ಲೇಸ್ಮೆಂಟ್ ವರದಿಯನ್ನು ನೋಡಿದರೆ, ಅವುಗಳಲ್ಲಿ ಅದರಲ್ಲಿರುವ ಅಂಕಿಅಂಶಗಳು ಆತಂಕಕಾರಿಯಾಗಿವೆ.
ಈ ವರ್ಷ ಪಾಸಾದ 24,230 ಐಐಟಿ ಮತ್ತು ಎನ್‌ಐಟಿ ವಿದ್ಯಾರ್ಥಿಗಳಲ್ಲಿ, ಸರಿಸುಮಾರು 8,000 ವಿದ್ಯಾರ್ಥಿಗಳು (ಸುಮಾರು 38 ಪ್ರತಿಶತ) ಯಾವುದೇ ನೌಕರಿ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ. ಇದೇ ರೀತಿ 2022 ಮತ್ತು 2023 ರಿಂದ ಐಐಟಿಗಳಿಂದ ಪದವಿ ಪಡೆದ ನೂರಾರು ವಿದ್ಯಾರ್ಥಿಗಳಿಗೆ ಇನ್ನೂ ಉದ್ಯೋಗ ಸಿಕ್ಕಿಲ್ಲ.
ಕ್ಯಾಂಪಸ್ ಸಂದರ್ಶನಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನೀಡಲಾಗುವ ವಾರ್ಷಿಕ ಸಂಭಾವನೆ ಸರಾಸರಿ 25 ಲಕ್ಷ ರೂ.ಗಳಿಂದ 16 ಲಕ್ಷ ರೂ.ಗೆ ಇಳಿದಿದೆ. ಈ ವರ್ಷ ಐಐಟಿ ವಿದ್ಯಾರ್ಥಿಗೆ ನೀಡಲಾಗುವ ಕನಿಷ್ಠ ಪ್ಯಾಕೇಜ್ ವಾರ್ಷಿಕ 4.20 ಲಕ್ಷ ರೂ.ಗಳಾಗಿದ್ದು, ಇದು ಕುಸಿಯುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ.
ಮುಂಬರುವ ವರ್ಷಗಳಲ್ಲಿ, ಐಟಿ ಕಂಪನಿಗಳು ದತ್ತಾಂಶ ಅಭಿವೃದ್ಧಿಪಡಿಸಲು ಅಥವಾ ಪರೀಕ್ಷಿಸಲು ಹೆಚ್ಚಿನ ಇಂಜಿನಿಯರುಗಳನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಬಿಲ್ ಗೇಟ್ಸ್ ಇತ್ತೀಚಿನ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಉದ್ಯೋಗಗಳನ್ನು ಕೃತಕ ಬುದ್ಧಿಮತ್ತೆ-ಸಕ್ರಿಯ ದತ್ತಾಂಶದಿಂದ ನಿರ್ವಹಿಸುವ ಕಾಲ ಬಂದಿದೆ. ಪ್ರಸ್ತುತ ಶೇ.33ರಷ್ಟು ದತ್ತಾಂಶವನ್ನು ಎಐ-ಶಕ್ತ ತಂತ್ರಜ್ಞಾನಗಳು ಹೇಗೆ ಅಭಿವೃದ್ಧಿಪಡಿಸುತ್ತಿವೆ ಎಂಬುದನ್ನು ಅವರು ಎತ್ತಿ ತೋರಿಸಿದರು.
ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣದ ಆಗಮನದೊಂದಿಗೆ, ಆಟೋಮೊಬೈಲ್, ನವೀಕರಣ ಇಂಧನ, ಹೈಬ್ರಿಡ್ ವಿದ್ಯುತ್ ಸಂಪನ್ಮೂಲಗಳು, ಏರೋಸ್ಪೇಸ್, ಅರೆವಾಹಕ ಕಂಪನಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಐಐಟಿಗಳಿಂದ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುತ್ತಿದ್ದ ಕೋಕಾ-ಕೋಲಾ, ಪೆಪ್ಸಿಯಂತಹ ಸಂಸ್ಕರಣಾ ಕಂಪನಿಗಳು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ರಿಲಯನ್ಸ್, ಅದಾನಿ ಮತ್ತು ಇತರ ಅನೇಕ ಉನ್ನತ ಐಟಿ ಸಂಸ್ಥೆಗಳು ಈ ನೇಮಕ ಹೆಚ್ಚು ಲಾಭದಾಯಕವಲ್ಲ ಎಂದು ಅರಿತುಕೊಂಡಿರುವಂತಿದೆ.
ಹೀಗಾಗಿ ದಿನೇದಿನೆ ಪ್ಲೇಸ್‌ಮೆಂಟ್ ಆಫರ್‌ಗಳ ಪ್ರಮಾಣ ಕುಗ್ಗುತ್ತಿದ್ದು ಇದು ಐಐಟಿಗಳಲ್ಲಿ ಜ್ಞಾನ/ಉದ್ಯೋಗ ಮಾರ್ಗ ಅರಸಿ ಬರುವ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ದುಬಾರಿಯಾಗಿ ಪರಿಣಮಿಸಿವೆ.